ವಿಜಯವಾಣಿ ಸುದ್ದಿಜಾಲ ಶಿರಸಿ: ಲಾಕ್ ಡೌನ್ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ದಲ್ಲಾಳಿಗಳ ಲಾಬಿಗೆ ಗ್ರಾಮೀಣ ಭಾಗದ ಕುಕ್ಕುಟೋದ್ಯಮಿಗಳು ನಲುಗುವಂತಾಗಿದೆ. ತಾಲೂಕಿನ ವಿವಿಧ ಫಾಮರ್್ಗಳಲ್ಲಿ ಲಕ್ಷಕ್ಕೂ ಹೆಚ್ಚಿನ ಬಾಯ್ಲರ್ ಕೋಳಿಗಳನ್ನು ಬೇಕಾಬಿಟ್ಟಿ ದರಕ್ಕೆ ಮಾರಾಟ ಮಾಡುವ ದುಸ್ಥಿತಿ ಬಂದೊದಗಿದೆ.
ಕೋಳಿ ಸಾಕಣೆಗೆ ಪೂರಕ ಹವಾಮಾನವಿರುವ ತಾಲೂಕಿನ ಬಂಡಲದಲ್ಲಿ ಹಲವಾರು ಕೋಳಿ ಫಾಮರ್್ಗಳಿವೆ. ಇಲ್ಲಿನ ಕೋಳಿ ಸಾಕಣೆದಾರರು ಕುಕ್ಕುಟ ಮಹಾಮಂಡಳದಡಿ ಕೋಳಿ ಸಾಕಣೆ ಗ್ರಾಮೀಣ ಕೈಗಾರಿಕಾ ಮತ್ತು ಮಾರಾಟ ಸಹಕಾರಿ ಸಂಘವನ್ನು ರಚಿಸಿಕೊಂಡಿದ್ದಾರೆ. ಈ ಸಂಘದಡಿಯಲ್ಲಿ ಕುಕ್ಕುಟೋದ್ಯಮ ನಡೆಸುತ್ತಿದ್ದಾರೆ. ಮಹಾಮಂಡಳವು ವೈಜ್ಞಾನಿಕವಾಗಿ ನಿಗದಿಪಡಿಸುವ ದರಕ್ಕೆ ಸರಿಯಾಗಿ ಕೋಳಿ, ಮೊಟ್ಟೆಗಳ ಮಾರಾಟ ಇಲ್ಲಿ ನಡೆಯುತ್ತದೆ. ಆದರೆ, ಕರೊನಾ ವೈರಸ್ ಸೋಂಕಿನ ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು ಮಹಾಮಂಡಳದ ದರಪಟ್ಟಿ ನಿಯಮವನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ದರಕ್ಕೆ ಬಾಯ್ಲರ್ ಕೋಳಿ ಖರೀದಿಸುತ್ತಿದ್ದಾರೆ. ಕೆ.ಜಿ.ಯೊಂದಕ್ಕೆ 130-140 ರೂ. ಇದ್ದ ದರವನ್ನು 60-70 ರೂ.ಗೆ ಇಳಿಸಿಕೊಂಡು ಸಾಕಣೆದಾರರಿಂದ ಖರೀದಿಸಿದ್ದಾರೆ. ಬಾಯ್ಲರ್ ಕೋಳಿಗಳು 45 ದಿನ ಬೆಳವಣಿಗೆಯಾಗಿ, ಸಾಮಾನ್ಯವಾಗಿ 2.2ರಿಂದ 2.5 ಕೆ.ಜಿ ತೂಕಕ್ಕೆ ಬಂದ ಮೇಲೆ ಮಾರಾಟ ಮಾಡಲಾಗುತ್ತದೆ. ಲಾಕ್ ಡೌನ್ ಘೊಷಣೆಗಿಂತ ಮೊದಲು ಸಾಕಣೆ ಮಾಡಿರುವ ಬಾಯ್ಲರ್ ಕೋಳಿಗಳಿಗೆ ಈಗ 60 ದಿನಗಳಾಗಿವೆ. ಬಹುತೇಕ ಎಲ್ಲವೂ 4 ಕೆ.ಜಿ.ಯಷ್ಟು ತೂಕಕ್ಕೆ ಬೆಳೆದಿವೆ. ಅವುಗಳಿಗೆ ಆಹಾರ ಹಾಕುವುದು ಭಾರವಾಗಿದೆ. ದಲ್ಲಾಳಿಗಳ ದರಕ್ಕೆ ಕೋಳಿ ನೀಡಿದರೆ ಹಾಕಿದ ಬಂಡವಾಳಕ್ಕೂ ಕುತ್ತಾಗುತ್ತಿದೆ. ಮಾರಾಟ ಮಾಡದೆ ಇದ್ದರೆ ಅವು ಸಾಯಲಾರಂಭಿಸುತ್ತವೆ. ಸುತ್ತಮುತ್ತ ಈ ಹಂತದಲ್ಲಿ ಬೆಳೆದ ಕನಿಷ್ಠ 1 ಲಕ್ಷ ಕೋಳಿಗಳು ಇವೆ.
1000 ಕೋಳಿ ಸಾಕಣೆಗೆ ಕನಿಷ್ಠ 2 ಲಕ್ಷ ರೂ. ವೆಚ್ಚವಾಗುತ್ತದೆ. ಸಾಕಣೆದಾರರಿಗೆ ಇವುಗಳ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ. ಕೋಳಿಗಳು ಮಾರಾಟವಾದರೆ, ಸಾಕಣೆದಾರರು ಉಳಿದುಕೊಳ್ಳುತ್ತಾರೆ. ಲಾಕ್ಡೌನ್ ಗಂಭೀರತೆಯ ಬಗ್ಗೆ ಅರಿವಿರುವ ಕೋಳಿ ಸಾಕಣೆದಾರರು, ಹೆಚ್ಚಿನ ಸಂಖ್ಯೆಯ ಕೋಳಿಗಳನ್ನು ಅಂಗಡಿಗಳಿಗೆ ಕೊಟ್ಟು ಅವರ ಮೂಲಕ ಗ್ರಾಹಕರಿಗೆ ತಲುಪಿಸಿದರೆ ದೊಡ್ಡ ನಷ್ಟದಿಂದ ಬಚಾವಾಗಲು ಸಾಧ್ಯ ಎನ್ನುತ್ತಿದ್ದಾರೆ.
ಮೊದಲೇ ನಷ್ಟದಲ್ಲಿರುವ ನಾವು, ಈಗ ಕೋಳಿಗಳ ಮಾರಾಟವಿಲ್ಲದೇ ಕಂಗಾಲಾಗಿದ್ದೇವೆ. ನಮಗೆ ಉಳಿದಿರುವುದು ಈ ಆರೋಗ್ಯವಂತ ಕೋಳಿಗಳನ್ನು ಹೊಂಡ ತೆಗೆದು ಹುಗಿಯುವುದೊಂದೇ ಮಾರ್ಗ. | ವಿಘ್ನೕಶ ನಾಯ್ಕ ಕೋಳಿ ಸಾಕಣೆದಾರ
ಕೋಳಿ ಮಾರಾಟಕ್ಕೆ ಸರ್ಕಾರದಿಂದ ಅಧಿಕೃತವಾಗಿ ಚಿಕನ್ ಅಂಗಡಿಗಳ ಬಾಗಿಲು ತೆರೆಸುವ ಕಾರ್ಯ ಆಗಬೇಕು. ಹೊರ ಜಿಲ್ಲೆಗಳ ಕೋಳಿ ಸಾಗಣೆ ವಾಹನಕ್ಕೆ ಜಿಲ್ಲೆ ಪ್ರವೇಶಿಸದಂತೆ ತಡೆಯುವ ಜತೆ ಇಲ್ಲಿನ ಕೋಳಿಗಳನ್ನು ಹೊರ ಜಿಲ್ಲೆಗೆ ಸಾಗಿಸದಂತೆ ಕ್ರಮ ವಹಿಸಿದರೆ ಸ್ಥಳೀಯ ಫಾಮರ್್ಗಳ ಮಾಲೀಕರು ಬಚಾವಾಗಬಹುದು. | ಸಂತೋಷ ಗೌಡರ್, ಗ್ರಾಮೀಣ ಕೈಗಾರಿಕಾ ಮತ್ತು ಮಾರಾಟ ಸಹಕಾರಿ ಸಂಘದ ಅಧ್ಯಕ್ಷ