ಗುಂಡ್ಲುಪೇಟೆ; ಪಟ್ಟಣದ ಚಿಕ್ಕಕೆರೆಯನ್ನು ಮೈಸೂರಿನ ಕುಕ್ಕರಹಳ್ಳಿ ಕೆರೆ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕಾರ್ಯ ಕೈಗೆತ್ತಿಕೊಂಡಿರುವ ಗುಂಡ್ಲು ಪರಿಸರ ಬಳಗಕ್ಕೆ ಜೈನ ಮಹಿಳಾ ಸಂಘಟನೆ ನೆರವು ನೀಡಲು ಮುಂದಾಗಿದೆ.
ಈ ಬಾರಿ ಹೆಚ್ಚಾಗಿ ಬಿದ್ದ ಮಳೆ ಹಾಗೂ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸಿದ ಪರಿಣಾಮ ತಾಲೂಕಿನ ಬಹುತೇಕ ಕೆರೆಗಳು ತುಂಬಿದ್ದರೂ ಪಟ್ಟಣದ ಚಿಕ್ಕಕೆರೆಗೆ ನೀರು ಹರಿಯುತ್ತಿದ್ದ ಕಾಲುವೆ ಮುಚ್ಚಿಕೊಂಡು ಬರಿದಾಗಿತ್ತು. ಈ ಹಿನ್ನೆಲೆಯಲ್ಲಿ ಗುಂಡ್ಲು ಪರಿಸರ ಬಳಗದ ಸಮಾನ ಮನಸ್ಕ ಯುವಕರು ಒಂದು ತಿಂಗಳಿನಿಂದ ಪ್ರತಿ ಭಾನುವಾರ ಶ್ರಮದಾನದ ಮೂಲಕ ಮುಚ್ಚಿಕೊಂಡಿದ್ದ ಕಾಲುವೆಯ ಹೂಳನ್ನು ತೆರವುಗೊಳಿಸಿದ ಪರಿಣಾಮ ಕೆರೆಗೆ ನೀರು ತುಂಬುವಂತಾಗಿತ್ತು.
ಕೆರೆಯ ಏರಿಯ ಮೇಲೆ ಹಾಗೂ ಕಲ್ಲಿನ ಸೋಪಾನಗಳನ್ನು ಆವರಿಸಿಕೊಂಡಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಪಟ್ಟಣದ ನಿವಾಸಿಗಳಿಗೆ ವಾಯುವಿಹಾರಕ್ಕೆ ಅವಕಾಶ ಮಾಡಲು ಮೈಸೂರಿನ ಕುಕ್ಕರಹಳ್ಳಿ ಕೆರೆ ಮಾದರಿಯಲ್ಲಿ ಕೆರೆಯ ಏರಿಯ ಮೇಲೆ ಕಾಲ್ನಡಿಗೆ ಮಾರ್ಗ ನಿರ್ಮಾಣ ಕಾರ್ಯ ಕೈಗೊಂಡಿದ್ದಾರೆ. ಇದರಿಂದ ವಲಸೆ ಪಕ್ಷಿಗಳೂ ಸೇರಿದಂತೆ ನೂರಾರು ಸ್ಥಳೀಯ ಜಾತಿಯ ಪಕ್ಷಿಗಳು ಆಗಮಿಸಿ ಕಲರವ ಎಬ್ಬಿಸುತ್ತಿವೆ. ಇದನ್ನು ಪಕ್ಷಿಧಾಮವಾಗಿ ಮಾಡುವ ಬಗ್ಗೆ ಚಿಂತಿಸಿ ಜ.8ರ ಭಾನುವಾರ ಮಕ್ಕಳಿಗೆ ಪಕ್ಷಿವೀಕ್ಷಣೆ ಕಾರ್ಯಕ್ರಮವನ್ನೂ ಆಯೋಜಿಸಿದ್ದಾರೆ. ದಾನಿಗಳ ನೆರವಿನಿಂದ ಪಾದಚಾರಿ ಮಾರ್ಗಕ್ಕೆ ಮಣ್ಣು ಹಾಕಿಸಿ ರಸ್ತೆಗೆ ಕೆರೆ ಕಾಣುವಂತೆ ಮಾಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ತಮ್ಮ ಪ್ರತಿ ಕಾರ್ಯವನ್ನೂ ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಅಪ್ಡೇಟ್ ಮಾಡುತ್ತಿರುವುದು ಪರಿಸರ ಹಾಗೂ ಸಾಮಾಜಿಕ ಕಳಕಳಿಯುಳ್ಳವರ ಗಮನ ಸೆಳೆಯುತ್ತಿದೆ. ಪ್ರತಿದಿನವೂ ತಂಡ ತಂಡವಾಗಿ ಕೆರೆಗೆ ಆಗಮಿಸಿ ಬಳಗದ ಕಾರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುವ ಜತೆಗೆ ಶ್ರಮದಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದವರು ಜೆಸಿಬಿ, ಟ್ರ್ಯಾ ಕ್ಟರ್‌ಗಳ ಖರ್ಚಿಗೆ ಆರ್ಥಿಕ ನೆರವನ್ನೂ ನೀಡುತ್ತಿದ್ದಾರೆ. ತಮಗೆ ಬಂದ ನೆರವನ್ನು ಗ್ರೂಪ್‌ನಲ್ಲಿ ತಿಳಿಸುವ ಮೂಲಕ ಬಳಗ ಪಾರದರ್ಶಕತೆ ಪ್ರದರ್ಶಿಸುತ್ತಿರುವುದರಿಂದ ಇನ್ನೂ ಹೆಚ್ಚಿನ ಜನರು ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ.
ಪಟ್ಟಣದ ಮಹಾವೀರ ಜೈನ್ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ನೇತೃತ್ವದಲ್ಲಿ ಇತರ ಸದಸ್ಯರು ಮಂಗಳವಾರ ಶ್ರಮದಾನಿಗಳಿಗೆ ಬೆಳಗಿನ ಉಪಾಹಾರ ಆಯೋಜಿಸುವ ಜತೆಗೆ ಈ ಕಾರ್ಯಕ್ಕೆ ತಾವೂ ಕೈಜೋಡಿಸುವ ಭರವಸೆ ನೀಡಿದರು. ಪರಿಸರ ಬಳಗದ ನಾಗಾರ್ಜುನಕುಮಾರ್, ಶ್ರೀಕಂಠ, ಚಿದಾನಂದ, ಜಿ.ಜಿ.ಮಲ್ಲಿಕಾರ್ಜುನ, ವೇಣುಗೋಪಾಲ, ಶಂಕರನಾರಾಯಣ ಜೋಯಿಸ್, ವಿ.ಆರ್.ಸುಬ್ಬರಾವ್ ಹಾಗೂ ಇತರರು ಇದ್ದರು.