ಶ್ರೀರಂಗಪಟ್ಟಣ: ಕುಂಭಮೇಳದಂತಹ ದೈವಿಕ ಮಹಾ ಕಾರ್ಯಕ್ರಮದಲ್ಲಿ ನಿಮಗೆ ವಹಿಸಿದ ಕಾಯಕವನ್ನು ಅಚ್ಚುಕಟ್ಟಾಗಿ ರಾಜ್ಯಮಟ್ಟದಲ್ಲಿ ಯಶಸ್ವಿಯಾಗಿ ನೆರವೇರಿಸಿದ ನೀವೆಲ್ಲರೂ ಕಾಯಕಯೋಗಿಗಳು ಎಂದು ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳು ತಿಳಿಸಿದರು.
ಪಟ್ಟಣದ ಪೂರ್ವವಾಹಿನಿಯ ಚಂದ್ರವನ ಆಶ್ರಮದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ತಿಕ ಮಾಸದ ಸೋಮವಾರ ಹುಣ್ಣಿಮೆ 119ನೇ ಬೆಳದಿಂಗಳ ಕಾರ್ಯಕ್ರಮ, ಗಿರಿಜಾ ಕಲ್ಯಾಣೋತ್ಸವ ಹಾಗೂ ಇತ್ತೀಚೆಗೆ ಜರುಗಿದ ಕುಂಭಮೇಳದಲ್ಲಿ ಶ್ರಮಿಸಿದ ಜಿಲ್ಲಾಡಳಿತದ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಭಿಮಾನದಿಂದ ‘ಕಾಯಕಯೋಗಿ’ ಎಂಬ ಬಿರುದು ನೀಡುವ ಜತೆಗೆ ಆತ್ಮೀಯವಾಗಿ ಗೌರವಿಸಿ ಮಾತನಾಡಿದರು.
ಸರ್ಕಾರದ ಸೇವೆಯ ಶ್ರದ್ಧೆಯೊಂದಿಗೆ ಧಾರ್ಮಿಕ ಕಾರ್ಯದಲ್ಲೂ ನಿಷ್ಠಾವಂತಿಕೆ ಹಾಗೂ ಮಹದೇಶ್ವರರ ಸ್ಮರಣೆ, ಪುಣ್ಯಸ್ನಾನದಲ್ಲಿ ಯಾವುದೇ ಸಣ್ಣ ಕೊರತೆ ಉಂಟಾಗದಂತೆ ಸಾಕಷ್ಟು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸದ ಪ್ರತಿಯೊಬ್ಬರಿಗೂ ಲಕ್ಷಾಂತರ ಭಕ್ತರ ಶುಭಹಾರೈಕೆ ಸಂದಿದೆ. ಜಿಲ್ಲೆಯಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಜಿಲ್ಲೆ ಮಾತ್ರವಲ್ಲ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಸಹ ಧಾರ್ಮಿಕ ಸಂದೇಶ ಪಸರಿಸಿದೆ. ನಿಮ್ಮ ಕಾಯಕ ಸೇವೆಗೆ ಪರಮಾತ್ಮನ ಆರ್ಶಿವಾದದಿಂದ ಕಾಯಕಯೋಗಿಗಳು ಎಂಬ ಬಿರುದು ಲಭಿಸಿದ್ದು, ನಿಮ್ಮ ಅಧಿಕಾರಾವಧಿಯಲ್ಲಿ ಯಶಸ್ಸು ಮತ್ತು ಪದೋನ್ನತಿ ಲಭಿಸಲಿ ಎಂದು ಆಶೀರ್ವದಿಸಿದರು.
ಬಳಿಕ ನೆರದಿದ್ದ ಸಭಿಕರಿಗೆ ಗಿರಿಜಾ ಕಲ್ಯಾಣ ಪೂಜಾಫಲದ ಬಗ್ಗೆ ಮತ್ತು ಆಶೀರ್ವಚನವನ್ನು ನೀಡಿದರು. ಗಿರಿಜಾ ಕಲ್ಯಾಣ ಮಹೋತ್ಸವವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಅವರ ಸಮ್ಮುಖದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು, ಜಿಪಂ ಸಿಇಒ ಶಾಂತ ಎಲ್.ಹುಲ್ಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಕೆ.ಆರ್.ಪೇಟೆ ಸೆಸ್ಕ್ ಎಇಇ ರಘು, ತಹಸೀಲ್ದಾರ್ ಎಂ.ವಿ.ರೂಪಾ, ಶ್ರೀರಂಗಪಟ್ಟಣ ತಹಸೀಲ್ದಾರ್ ಶ್ವೇತಾ.ಎನ್.ರವೀಂದ್ರ, ಪಾಂಡವಪುರ ತಹಸೀಲ್ದಾರ್ ನಯನ, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಎಸ್.ಪಿ. ನಾಗರಾಜ್, ನಿವೃತ್ತ ಶಿಕ್ಷಕ ದೇವರಾಜೇಗೌಡ, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಆಪ್ತ ಕಾರ್ಯದರ್ಶಿ ಎಚ್.ಜಿ.ಪ್ರಭಾಕರ್, ಚಂದ್ರವನ ಆಶ್ರಮದ ಪ್ರಧಾನ ಆಗಮಿಕ ಬಿ.ಎಸ್.ಗದ್ಗೇಶ್ ಶಾಸ್ತ್ರಿ, ಪಾಂಡವಪುರದ ಬಿಇಒ ಅವರನ್ನು ಕಾಯಕಯೋಗಿ ಬಿರುದು ನೀಡಿ ಸನ್ಮಾನಿಸಲಾಯಿತು.