ಬೆಂಗಳೂರು ಗ್ರಾಮಾಂತರ: ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಕುಂಬಾರ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜತೆಗೆ ಎಲ್ಲ ಸಮುದಾಯಗಳ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆಯ ಕನಕಭವನದಲ್ಲಿ ಎಂಟಿಬಿ ಚಾರಿಟಬಲ್ ಟ್ರಸ್ಟ್‌ನಿಂದ ಸೋಮವಾರ ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕರೊನಾ ಲಾಕ್‌ಡೌನ್ ಕಾರಣಕ್ಕೆ ಬಹುತೇಕ ಎಲ್ಲ ಸಮುದಾಯಗಳು ಆರ್ಥಿಕ ಸಂಕಷ್ಟ ಎದುರಿಸಿವೆ. ಇದರಿಂದ ಕುಂಬಾರ ಸಮುದಾಯವೂ ಹೊರತಾಗಿಲ್ಲ, ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರ ಮನವಿ ಮೇರೆಗೆ ಸುಮಾರು 250 ಕುಂಬಾರ ಸಮುದಾಯದ ಕುಟುಂಬಗಳಿಗೆ ದಿನಸಿಕಿಟ್ ವಿತರಿಸಲಾಗುತ್ತಿದೆ ಎಂದರು.
ಸರ್ಕಾರದ ಕಾರ್ಮಿಕರ ಇಲಾಖೆ ತಾಲೂಕಿನಾದ್ಯಂತ ದಿನಸಿ ಕಿಟ್ ವಿತರಿಸಿದೆ, ಅದೇ ರೀತಿ ಎಂಟಿಬಿ ಚಾರಿಟಬಲ್ ಟ್ರಸ್ಟ್ ಹಾಗೂ ಬಿಜೆಪಿ ಮುಖಂಡರ ಸಹಯೋಗದಲ್ಲಿ ತಾಲೂಕಿನ ಪ್ರತಿ ಪಂಚಾಯಿತಿಗಳಲ್ಲಿ ದಿನಸಿಕಿಟ್ ವಿತರಿಸಿದ್ದು, ಎಲ್ಲ ಸಮುದಾಯಗಳಿಗೂ ಕೈಲಾದ ನೆರವು ನೀಡುವ ಕಾರ್ಯಕ್ರಮ ಮುಂದುವರಿಸಲಾಗಿದೆ ಎಂದು ತಿಳಿಸಿದರು.
ಶಿಕ್ಷಣದಿಂದ ದೂರಮಾಡಬೇಡಿ: ಮಕ್ಕಳೇ ನಾಳಿನ ಭವ್ಯಭಾರತದ ಭವಿಷ್ಯದ ಪ್ರಜೆಗಳು, ಶಿಕ್ಷಣದ ಮೂಲಕವೇ ಮಕ್ಕಳನ್ನು ಉತ್ತಮ ಪ್ರಜೆಗಳನ್ನು ರೂಪಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು, ಈ ನಿಟ್ಟಿನಲ್ಲಿ ಕುಂಬಾರ ಸಮುದಾಯದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಬೇಕು. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ನಾವುಗಳು ಸಮುದಾಯದ ಮುಖಂಡರು ಕೈಜೋಡಿಸುತ್ತೇವೆ. ಪಾಲಕರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಚಿವರು ಮನವಿ ಮಾಡಿದರು. ಕರೊನಾ ಎರಡನೇ ಅಲೆ ನಿಯಂತ್ರಣದಲ್ಲಿದ್ದು, ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ, ಮೂರನೇ ಅಲೆ ಮುನ್ಸೂಚನೆ ಹಿನ್ನೆಲೆಯಲ್ಲಿ ತಜ್ಞರ ವರದಿ ಆಧರಿಸಿ ಸರ್ಕಾರ ಕೆಲವೊಂದು ಮಾರ್ಗಸೂಚಿ ಸಿದ್ಧಪಡಿಸಿದೆ, ಸಾರ್ವಜನಿಕರು ಕರೊನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.