ಚನ್ನರಾಯಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಂದೂರು ಮಠದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇಗುಲದ ಆವರಣದಲ್ಲಿ ವಿಜಯದಶಮಿ ಪ್ರಯುಕ್ತ ಬನ್ನಿಪೂಜೆ(ಬನ್ನಿ ಛೇಧ) ಕಾರ್ಯಕ್ರಮವು ಬುಧವಾರ ಬೆಳಗ್ಗೆ ಸಾಂಪ್ರದಾಯಿಕವಾಗಿ ನಡೆಯಿತು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಸರ್ವಲಂಕೃತ ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಿ ಬನ್ನಿ ಹಾಗೂ ಬಾಳೆಕಂದನ್ನು ಛೇದಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಬಳಿಕ ಶ್ರೀಗಳು ಮಾತನಾಡಿ, ದುಷ್ಟ ಗುಣಗಳನ್ನು ತೊಡೆದು ಹಾಕಿ ಸದ್ಗುಣ ಭಾವನೆ ಬೆಳೆಸಿಕೊಂಡಲ್ಲಿ ಮಾತ್ರ ಮನುಷ್ಯನು ಭಗವಂತನ ಕೃಪೆಗೆ ಪಾತ್ರನಾಗುವುದರ ಜತೆಗೆ ಬದುಕಿನಲ್ಲಿ ಮುಕ್ತಿ ಪಡೆಯಲು ಸಾಧ್ಯ ಎಂದು ಆಶಿರ್ವಚನ ನೀಡಿದರು.
ಮನುಷ್ಯ ಅದೆಷ್ಟೇ ಎತ್ತರಕ್ಕೆ ಬೆಳೆದು ಅದೇನೇ ಆವಿಷ್ಕಾರ ಸಾಧನೆ ಮಾಡಿದರೂ ಅದರ ಹಿಂದೆ ದೈವದ ಮಹಾನ್ ಶಕ್ತಿ ಇರುತ್ತದೆ. ಆದರೆ ದೇವರನ್ನು ಕಡೆಗಣಿಸಿ ಮಾಡಿದ್ದೆಲ್ಲ ನನ್ನದೇ ಎಂದರೆ ಸ್ವಾರ್ಥದ ಸುಳಿಯಲ್ಲಿ ಸಿಲುಕಿ ಮುಂದೊಂದು ದಿನ ಆತನ ಬದುಕು ನಶ್ವರವಾಗಲಿದೆ ಎಂದರು.
ಸನಾತನ ಧರ್ಮ, ಸಂಸ್ಕೃತಿ, ಸಂಪ್ರದಾಯ ಹಾಗೂ ಸಂಸ್ಕಾರ ಭಾವನೆಯೊಂದಿಗೆ ಮುನ್ನಡೆದರೆ ಎಲ್ಲರ ಸಂಕಷ್ಟಗಳು ಭಗವಂತನ ಪಾದದಲ್ಲಿ ಲೀನವಾಗಲಿದ್ದು ಜೀವನದಲ್ಲಿ ಸುಖಃ, ಶಾಂತಿ ಹಾಗೂ ನೆಮ್ಮದಿ ಸೇರಿದಂತೆ ಎಲ್ಲವೂ ತಾನಾಗಿಯೇ ದೊರೆಯಲಿದೆ ಎಂದು ತಿಳಿಸಿದರು.
ಇದ್ದಕ್ಕೂ ಮೊದಲು ಶ್ರೀಕ್ಷೇತ್ರದ ಆದಿದೇವತೆ ಶ್ರೀ ಮೆಳಿಯಮ್ಮ ದೇವಿಗೆ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ, ಚಿಕ್ಕಬಳ್ಳಾಪುರದ ಮಂಗಳನಾಥಸ್ವಾಮೀಜಿ, ಶ್ರೀಕ್ಷೇತ್ರ ಕಬ್ಬಳಿ ಮಠದ ಶ್ರೀ ಶಿವಪುತ್ರನಾಥಸ್ವಾಮೀಜಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.