ಜಿಲ್ಲೆ

ಕುಂದು-ಕೊರತೆಗಳಿದ್ದಲ್ಲಿ ಪರಿಹರಿಸಿ

ಬಳ್ಳಾರಿ : ಆಸ್ಪತ್ರೆಗಳಲ್ಲಿ ಶುಚಿತ್ವ ಕಾಪಾಡುವಲ್ಲಿ ಕಾರ್ಯನಿರ್ವಹಿಸುವ ಸಫಾಯಿ ಕರ್ಮಚಾರಿಗಳ ಆರೋಗ್ಯದ ಕಾಳಜಿಯೊಂದಿಗೆ ನಿಗದಿತ ಸಮಯದಲ್ಲಿ ವೇತನ ಪಾವತಿ ಸೇರಿದಂತೆ ಯಾವುದೇ ಕುಂದುಕೊರತೆಗಳು ಉಂಟಾಗದಂತೆ ಕ್ರಮವಹಿಸಬೇಕು ಎಂದು ಸಫಾಯಿ ಕರ್ಮಚಾರಿ ವಿಭಾಗದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಕಂದಕೂರು ರಾಮುಡು ಹೇಳಿದರು.
ನಗರದ ಡಿಎಚ್‌ಒ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸಫಾಯಿ ಕರ್ಮಚಾರಿಗಳ ಕುಂದುಕೊರತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಪ್ರತಿಯೊಂದು ಇಲಾಖೆಯ ಕಚೇರಿಗಳಲ್ಲಿ ಸ್ವಚ್ಛವಾಗಿಡಲು ಹಾಗೂ ಮೂಲ ಸೌಕರ್ಯಗಳ ಕಾಳಜಿಯನ್ನು ತೆಗೆದುಕೊಳ್ಳಲು ಸಫಾಯಿ ಕರ್ಮಚಾರಿಗಳ ಕರ್ತವ್ಯ ಬಹಳಷ್ಟು ಪ್ರಾಮುಖ್ಯತೆ ಹೊಂದಿದೆ. ವಿಶೇಷವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಾರ್ಡ್‌ಗಳು, ಹೆರಿಗೆ ಕೊಠಡಿ, ರೋಗಿಗಳಿಗೆ ಬ್ಯಾಂಡೇಜ್ ಹಾಕುವುದು ಸೇರಿದಂತೆ ಪ್ರಮುಖ ಸ್ವಚ್ಛತಾ ಕೆಲಸಗಳನ್ನು ನಿರ್ವಹಿಸುತ್ತಿದ್ದು, ಅವರ ವೇತನ ಇತರೆ ಭತ್ಯೆಗಳು ಸಕಾಲದಲ್ಲಿ ಒದಗಿಸುವಿಕೆ ಮತ್ತು ಸಕಾಲದಲ್ಲಿ ಆರೋಗ್ಯ ತಪಾಸಣೆ ಕೈಗೊಳ್ಳಬೇಕು ಎಂದರು.
ಡಿಎಚ್‌ಒ ಡಾ. ವೈ. ರಮೇಶ್ ಬಾಬು ಮಾತನಾಡಿ, ನಾನ್ ಕ್ಲಿನಿಕಲ್ ಸೇವೆಗಳಡಿ ಸಿಬ್ಬಂದಿಯವರ ವೇತನವನ್ನು ಸಂಬಂಧಿಸಿದವರಿಗೆ ಏಜೆನ್ಸಿ ಮೂಲಕ ಪಾವತಿಸುವ ಜೊತೆಗೆ ಪಿಎಫ್, ಇಎಸ್‌ಐ ಒಳಗೊಂಡಂತೆ ಕಟಾವುಗಳನ್ನು ಕೈಗೊಳ್ಳಲಾಗುತ್ತಿದೆ. ಇಲಾಖೆಯಡಿ ನೀಡುವ ವೈದ್ಯಕೀಯ ಇತರೆ ಸೌಲಭ್ಯಗಳನ್ನು ನಿಯಮಾನುಸಾರ ಒದಗಿಸಲಾಗುತ್ತಿದೆ ಎಂದರು.