ತ್ಯಾಮಗೊಂಡ್ಲು ಲಕ್ಷ್ಮೀಕಾಂತ್
ಬೇಗೂರು ರಸ್ತೆಯಿಂದ ನಿಡವಂದ ಗ್ರಾಮದವರೆಗೂ 13 ಕಿಮೀ ರಸ್ತೆ ವಿಸ್ತರಣೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಸಾರ್ವಜನಿಕರಿಗೆ ಶಾಪವಾಗಿ ಪರಿಣಮಿಸಿದೆ.
ರಸ್ತೆ ಪಕ್ಕದಲ್ಲಿ ಎರಡು ಅಡಿವರೆಗೆ ಗುಂಡಿ ತೆಗೆದು ತಿಂಗಳುಗಳೇ ಕಳೆದರೂ ಮುಚ್ಚುವ ಗೋಜಿಗೆ ಹೋಗದ ಹಿನ್ನೆಲೆಯಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ.
ಶಾಸಕರು ಭೂಮಿಪೂಜೆ ವೇಳೆ ಹೇಳಿದ್ದ 12 ಮೀಟರ್ ವಿಸ್ತೀರ್ಣದ ರಸ್ತೆ ಮತ್ತು ಪಟ್ಟಣದ ರಸ್ತೆ ಅಕ್ಕ ಪಕ್ಕದಲ್ಲಿ ಪಾದಚಾರಿ ಮಾರ್ಗ ಹಾಗೂ ಚರಂಡಿಗೆ ಎಷ್ಟು ಜಾಗ ಬಿಡುತ್ತಾರೆ ಎಂಬ ಮಾಹಿತಿ ಇಲ್ಲ, ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬ ತೆರವು ಮಾಡಿಲ್ಲ, ಇದರ ನಡುವೆ ಮರಗಳ ತೆರವು ಮಾಡದೆ ಕಾಮಗಾರಿ ನಡೆಸಲಾಗುತ್ತಿದೆ, ಇದರ ಜತೆಗೆ ಒಂದು ಕಡೆ ಕಾಮಗಾರಿ ಪೂರ್ಣ ಮಾಡದೆ ಇನ್ನೊಂದು ಕಡೆ ಹಳ್ಳ ತೆಗೆಯಲಾಗುತ್ತಿದೆ. ಇದರಿಂದ ತ್ಯಾಮಗೊಂಡ್ಲುವಿನಿಂದ ಬೇಗೂರಿಗೆ ಹೋಗಲು ಕನಿಷ್ಠ ಒಂದು ಗಂಟೆ ಬೇಕಾಗುತ್ತಿದೆ.
ಇಲಾಖೆಯಿಂದ ಉಢಾಪೆ ಉತ್ತರ: ತ್ಯಾಮಗೊಂಡ್ಲು ಪಟ್ಟಣದಿಂದ ಬೇಗೂರಿನವರೆಗೆ ಹಾಗೂ ನಿಡವಂದದವರೆಗೂ ರಸ್ತೆ ಮಧ್ಯೆ ಮಂಡಿಯುದ್ದ ಗುಂಡಿಗಳು ನಿರ್ಮಾಣವಾಗಿದ್ದು, ಅದನ್ನು ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಲೋಕೋಪಯೋಗಿ ಇಲಾಖೆ ರಸ್ತೆ ವಿಸ್ತರಣೆ ಬಳಿಕ ಎಲ್ಲವೂ ಸರಿಹೋಗುತ್ತದೆ ಎಂಬ ಉಡಾಫೆ ಉತ್ತರ ನೀಡುತ್ತಿದೆ. ಗುಂಡಿ ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸುತ್ತಿವೆ.
ರಸ್ತೆ ವಿಸ್ತರಣೆ ಸುದ್ದಿ 6 ತಿಂಗಳಿಂದ ಹರಿದಾಡುತ್ತಿದೆ, ನಾಳೆಯಿಂದಲೇ ರಸ್ತೆ ಬದಿಯಲ್ಲಿರುವ ಕಟ್ಟಡಗಳನ್ನು ತೆರವು ಮಾಡುತ್ತಾರೆ ಎಂಬ ಮಾತು ಹರಿಬಿಡಲಾಗುತ್ತಿದೆ. ಇದರಿಂದ ವರ್ತಕರು ಗೊಂದಲದಲ್ಲಿದ್ದಾರೆ, ಯಾವಾಗ ಈ ಕೆಲಸ ಪ್ರಾರಂಭವಾಗುತ್ತದೆ ಹಾಗೂ ಎಷ್ಟು ಅಗಲದ ರಸ್ತೆ ಆಗುತ್ತದೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ಎಸ್.ಮಂಜುನಾಥ್, ತ್ಯಾಮಗೊಂಡ್ಲು ವರ್ತಕರ ಸಂಘದ ಅಧ್ಯಕ್ಷ ಜಿಲ್ಲಾ ಮುಖ್ಯರಸ್ತೆಯಾಗಿ ಮೇಲ್ದರ್ಜೆಗೇರಿಸಿರುವುದರಿಂದ 80 ಅಡಿವರೆಗೂ ರಸ್ತೆ ವಿಸ್ತರಣೆ ಮಾಡಬಹುದು. ಆದರೆ ಈ ಬಗ್ಗೆ ಯಾವುದೇ ಸೂಚನೆ ಇಲ್ಲ. ಈ ಕಾಮಗಾರಿ ಅವೈಜ್ಞಾನಿಕವಾಗಿದೆ, ಎಷ್ಟು ಅಗಲದ ರಸ್ತೆ ಎಂಬುದರ ಪೂರ್ಣ ಮಾಹಿತಿ ಇದುವರೆಗೂ ಸಿಕ್ಕಿಲ್ಲ. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದರೂ ಉತ್ತರ ಇಲ್ಲ. ಜಿ.ಬಿ.ರಕ್ಷಿತ್, ಜಿಲ್ಲಾ ಯುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಾಮಗಾರಿ ನಿಧಾನವಾಗಿ ನಡೆಯುತ್ತಿರುವ ಬಗ್ಗೆ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದೆ, ಒಪ್ಪಂದದ ಪ್ರಕಾರ 2021ರ ೆಬ್ರವರಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಕರೊನಾದಿಂದಾಗಿ ಸಮಯಾವಕಾಶ ನೀಡಲಾಗಿದೆ. ನ್ಯೂನತೆ ಸರಿಪಪಡಿಸಿಕೊಳ್ಳಲು ತಿಳಿಸಲಾಗಿದೆ. ತಪ್ಪಿದಲ್ಲಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ನಟರಾಜು, ಎಇಇ, ಲೋಕೋಪಯೋಗಿ ಇಲಾಖೆ ನೆಲಮಂಗಲ