ಶಿಕಾರಿಪುರದ ಬನುಮಯ್ಯ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿದರು. ಕೆ.ಪಿ.ರುದ್ರಪ್ಪ , ರಂಗಪ್ಪ, ಕೆ.ಎಸ್.ಗುರುಮೂರ್ತಿ, ಮುರಳಿಧರ ಹಾಲಪ್ಪ ಇತರರಿದ್ದರು. 
ಜಿಲ್ಲೆ

ಕುಂಚಿಟಿಗ ಸಮಾಜಕ್ಕೆ ಶಕ್ತಿತುಂಬಿದ್ದು ಬಿಎಸ್‌ವೈ

ಶಿಕಾರಿಪುರ: ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕುಂಚಿಟಿಗ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿ ಶಕ್ತಿ ತುಂಬಿದ್ದಾರೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಬನುಮಯ್ಯ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಂಚಿಟಿಗ ಸಮಾಜ ಅತ್ಯಂತ ಸ್ವಾಭಿಮಾನಿ ಮತ್ತು ಪರಿಶ್ರಮಿ ಸಮಾಜ ಎಂದರು.

ಕುಂಚಿಟಿಗ ಸಮಾಜದ ಜಿಲ್ಲಾ ಸಂಘಕ್ಕೂ 15 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ. ಸಹಕಾರಿಗಳ ಶಕ್ತಿ ಅದ್ಭುತವಾದಂತಹ ಶಕ್ತಿ. ಶಿಕಾರಿಪುರದಲ್ಲಿ ಸಾಕಷ್ಟು ಸಹಕಾರಿ ಧುರೀಣರು ಇದ್ದಾರೆ. ಹೆಚ್ಚಿನ ಪ್ರಮಾಣದ ಮಹಿಳಾ ಸಹಕಾರ ಸಂಘಗಳು, ಸಹಕಾರ ಸಂಘಗಳು ತಾಲೂಕಿನಲ್ಲಿವೆ. ಸಹಕಾರ ಕ್ಷೇತ್ರ ಇನ್ನಷ್ಟು ಬಲಗೊಳ್ಳಬೇಕು. ಸಹಕಾರ ಪದ್ಧತಿಯನ್ನು ನಮ್ಮ ಹಿರಿಯರು ನಮಗೆ ಬಿಟ್ಟು ಹೋಗಿದ್ದಾರೆ ಎಂದು ಹೇಳಿದರು.

ಶಿರಾ ಚುನಾವಣೆಯಲ್ಲಿ ಕುಂಚಿಟಿಗ ಸಮಾಜಕ್ಕೆ ಆದ್ಯತೆ ನೀಡಿ ಆ ಸಮಾಜದ ವೈದ್ಯರನ್ನು ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸಿಕೊಂಡು ಬರಲಾಗಿದೆ. ಅತ್ಯಂತ ಸಣ್ಣ ಸಮುದಾಯ ಸವಿತಾ ಸಮಾಜಕ್ಕೂ ಕೂಡ ಅನುದಾನ ನೀಡಿ ಆ ಸಮಾಜದವರು ಪುರಸಭೆಯ ಅಧ್ಯಕ್ಷರಾಗುವಂತೆ ಮಾಡಿದವರು ಯಡಿಯೂರಪ್ಪ ಎಂದರು.

ಸಭಾಪತಿಯಾಗಿದ್ದ ಕೆ.ವಿ.ನರಸಪ್ಪ ಅವರ ನೆನಪಿಗಾಗಿ ರಂಗಮಂದಿರವನ್ನು ನಿರ್ಮಿಸಿ ಅವರಿಗೆ ಗೌರವ ಸಲ್ಲಿಸಿದ್ದಾರೆ. ಪ್ರತಿಯೊಂದು ಸಮಾಜವೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರಬೇಕು. ಇಂತಹ ಸಹಕಾರ ಸಂಘಗಳು ಜನತೆಗೆ ಆರ್ಥಿಕ ವಾಗಿ ಶಕ್ತಿ ತುಂಬುತ್ತವೆ. ಬನುಮಯ್ಯ ಸಹಕಾರ ಸಂಘ ಇನ್ನಷ್ಟು ಎತ್ತರಕ್ಕೇರಲಿ ಎಂದು ಆಶಿಸಿದರು.

ಸಂಘದ ಅಧ್ಯಕ್ಷ ಕೆ.ಪಿ.ರುದ್ರಪ್ಪ , ಉಪಾಧ್ಯಕ್ಷ ರಂಗಪ್ಪ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಕೌಶಲ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ತಾಲೂಕು ಕುಂಚಿಟಿಗರ ಸಮಾಜದ ಅಧ್ಯಕ್ಷ ಕೆ.ವಿ.ಲೋಹಿತ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಡಿ.ಎಲ್. ಬಸವರಾಜ್, ಚಂದ್ರಶೇಖರ ಗೌಡ, ಸಹಕಾರಿ ಧುರೀಣ ಬಿ.ಡಿ.ಭೂಕಾಂತ್, ಪಾಲಾಕ್ಷಪ್ಪ ಭದ್ರಾಪುರ ಇತರರಿದ್ದರು.