ಜಿಲ್ಲೆ

ಕುಂಚಿಗ ಬಲವರ್ಧನೆಗೆ ಬೇಕು ಸಹಕಾರ

ಚಿತ್ರದುರ್ಗ: ಆರ್ಥಿಕವಾಗಿ ಸಬಲರಾಗಿರುವವರು ಸಮಾಜದ ಬೆಳವಣಿಗೆಗೆ ಸಹಾಯ ಮಾಡಬೇಕಿದೆ ಎಂದು ಕುಂಚಿಗ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ, ಮಾಜಿ ಶಾಸಕ ಎಂ.ಬಿ.ತಿಪ್ಪೇರುದ್ರಪ್ಪ ಕರೆ ನೀಡಿದರು.


ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗಾಗಿ ಸಮಾಜ ಮತ್ತು ಉತ್ಥಾನ ಟ್ರಸ್ಟ್‌ನಿಂದ ನಗರದ ನೀಲಕಂಠೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು.


ಸಮಾಜ ಈಗ ಕಷ್ಟದಲ್ಲಿದ್ದು, ಇಂಥ ಸಮಯದಲ್ಲಿ ಸಮುದಾಯದವರು ನೆರವಿಗೆ ಬರಬೇಕಿದೆ. ಅಧಿಕಾರ, ಅಂತಸ್ತು ಇದ್ದಾಗ ದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಸಮಾಜದ ಕಟ್ಟಡದ ನಿರ್ಮಾಣಕ್ಕೆ ಆರ್ಥಿಕ ಬಲ ತುಂಬಲು ಮುಂದಾಗಬೇಕು ಎಂದು ಮನವಿ ಮಾಡಿದರು.


ಪತ್ರಕರ್ತ ಜಿ.ಎಸ್.ಉಜ್ಜನಪ್ಪ ಮಾತನಾಡಿ, ಪ್ರತಿಭೆಗಳ ಅನಾವರಣಕ್ಕೆ ಇಂಥ ಕಾರ್ಯಕ್ರಮಗಳು ತುಂಬಾ ಅಗತ್ಯ. ವಿದ್ಯಾರ್ಥಿಗಳು ಗ್ರಂಥಾಲಯಗಳ ಸದುಪಯೋಗ ಪಡೆದುಕೊಳ್ಳುವ ಮೂಲಕ ಜ್ಞಾನಭಂಡಾರ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


32 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮುಖಂಡರಾದ ಕೃಷ್ಣಮೂರ್ತಿ, ಬಸವರಾಜಪ್ಪ, ಕುಬೇರಪ್ಪ, ರಾಜಶೇಖರಪ್ಪ, ಭಾವನಾ, ಹರೀಶ್ ಇತರರಿದ್ದರು.