ಚಿಂಚೋಳಿ (ಕಲಬುರಗಿ): ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ನೇತೃತ್ವದಲ್ಲಿ ಆರಕ್ಷಕರು ಕುಂಚಾವರಂ ವನ್ಯಜೀವಿ ಧಾಮದಲ್ಲಿ ಭಾನುವಾರ ಚಾರಣ ನಡೆಸಿ, ನಿಸರ್ಗದ ಸೊಬಗನ್ನು ಸವಿದರು.
ಶೇರಿಭಿಕ್ಕನಹಳ್ಳಿಯಿಂದ ಆರಂಭವಾದ ಚಾರಣ ಚಂದ್ರಪಳ್ಳಿವರೆಗೂ ನಡೆಯಿತು. ಸುಮಾರು 12 ಕಿಮೀ. ಟ್ರೆಕ್ಕಿಂಗ್ ಮಾಡಿದ ಪೊಲೀಸರು, ಅರಣ್ಯದ ಸೊಬಗನ್ನು ಕಣ್ತುಂಬಿಕೊಂಡು ಸಾಗಿದರು. ಮಾರ್ಗ ಮಧ್ಯೆ ಹಾಡು, ಒಂದಿಷ್ಟು ಮಾತುಕತೆ ನಡೆಯಿತು.
ನಿರಂತರ ವರ್ಷಧಾರೆಯಿಂದ ಅರಣ್ಯ ಪ್ರದೇಶ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಎಲ್ಲೆಡೆ ಹಕ್ಕಿಗಳ ಚಿಲಿಪಿಲಿ ನಿನಾದ ಕೇಳಿಸುತ್ತಿತ್ತು. ಇನ್ನು ನವಿಲುಗಳ ಧ್ವನಿಯೂ ಇಂಪಾಗಿ ಕೇಳಿಸುತ್ತಿತ್ತು. ಹಸಿರಿನ ಮಧ್ಯೆ ಜಲಧಾರೆಯ ಝುಳು- ಝುಳು ಶಬ್ಧ ಕಿವಿಗೆ ಹಿತ ನೀಡಿತು. ಬೆಟ್ಟದ ಬರಕಿ ಏರಿಯಾದಿಂದ ಸಾದನಗವಿ ಪ್ರದೇಶ, ಕಾನಲಮಾರಿ, ಫಸಲಮೋರಿ ಮೂಲಕ ಚಂದ್ರಂಪಳ್ಳಿ ತಲುಪಿ ಸಮಾಪ್ತಿಗೊಂಡಿತು.
ಡಿವೈಎಸ್ಪಿಗಳಾದ ಕೆ.ಬಸವರಾಜ (ಚಿಂಚೋಳಿ), ಉಮೇಶ ಚಿಕ್ಕಮಠ (ಶಹಾಬಾದ್), ಎಸ್.ಎಚ್.ಶೀಲವಂತ (ಗ್ರಾಮೀಣ), ಜೆ.ಎಚ್. ಇನಮದಾರ (ಡಿಸಿಆರ್ಬಿ ಯುನಿಟ್), ಸಿಪಿಐಗಳಾದ ಮಹಾಂತೇಶ ಪಾಟೀಲ್, ಜಗದೀಶ, ಪ್ರಕಾಶ ಯಾತನೂರ, ಎ.ಎಸ್.ಪಟೇಲ್, ವಿನಾಯಕ, ಭೀಮಾಶಂಕರ, ಚನ್ನಬಸವ, ಹಣಮಂತ, ಪಿಎಸ್ಐ ಮಂಜುನಾಥರೆಡ್ಡಿ, ಅರಣ್ಯ ಅಧಿಕಾರಿ ಸಂಜು ಚವ್ಹಾಣ್, ಸಿದ್ಧರೂಢ ಹಾಗೂ ವಿವಿಧ ಠಾಣೆಯ ಪೊಲೀಸರು ಪಾಲ್ಗೊಂಡಿದ್ದರು.