ಜಿಲ್ಲೆ

ಕೀಳರಿಮೆ ಬಿಟ್ಟು ಸ್ವಾವಲಂಬಿಗಳಾಗಿ: ಸಚಿವ ಡಾ.ಸುಧಾಕರ್ ಸಲಹೆ

ಚಿಕ್ಕಬಳ್ಳಾಪುರ : ಹೈನುಗಾರಿಕೆ ಅಭಿವೃದ್ಧಿಯಲ್ಲಿ ಮಹಿಳೆಯರ ಪರಿಶ್ರಮವೇ ಬಹುಪಾಲಿದೆ, ಆದರೆ, ಫಲ ಮಾತ್ರ ಪುರುಷರ ಪಾಲಾಗುತ್ತಿದೆ. ಆದ್ದರಿಂದ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುವ ಸಾಮರ್ಥ್ಯ ಹೊಂದಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದರು.

ತಾಲೂಕಿನ ಆವಲಗುರ್ಕಿಯಲ್ಲಿ ಡಿಸಿಸಿ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಬ್ಯಾಂಕ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ಶೂನ್ಯ ಬಡ್ಡಿ ದರದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಮತ್ತು ರೈತರಿಗೆ ಬೆಳೆಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೀಳರಿಮೆ ಬಿಟ್ಟು ಆದಾಯ ತರುವ ಕೌಶಲ ತರಬೇತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸ್ತ್ರೀಶಕ್ತಿ ಸಂಘಗಳು ಮಹಿಳಾ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸ್ವಯಂ ಉದ್ಯೋಗಾಧಾರಿತ ಚಟುವಟಿಕೆ, ಹಣ ಉಳಿತಾಯ ಮೂಲಕ ಆರ್ಥಿಕ ಮತ್ತು ಸಾಮಾಜಿಕವಾಗಿ ಶಕ್ತಿ ವೃದ್ಧಿಸಿಕೊಳ್ಳುತ್ತಿದ್ದು ಸಮಾಜ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅಭಿಪ್ರಾಯಪಟ್ಟರು.

ರೈತರು, ಮಹಿಳೆಯರ ಆರ್ಥಿಕಾಭಿವೃದ್ಧಿಗಾಗಿ ಶೂನ್ಯ ಬಡ್ಡಿ ದರದಲ್ಲಿ ಒದಗಿಸುತ್ತಿರುವ ಸಾಲ ಸೌಲಭ್ಯವನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು. ಸಕಾಲಕ್ಕೆ ಸಾಲ ಮರುಪಾವತಿಸಬೇಕೆಂದು ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ತಿಳಿಸಿದರು.

ಜಿಪಂ ಸಿಇಒ ಬಿ.ಫೌಜಿಯಾ ತರನ್ನಮ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಉಪ ವಿಭಾಗಧಿಕಾರಿ ಎ.ಎನ್.ರಘುನಂದನ್, ಜಿಲ್ಲಾ ನಗಾರಭಿವೃದ್ಧಿ ಕೋಶಾಧಿಕಾರಿ ರೇಣುಕಾ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ. ಎನ್.ಭಾಸ್ಕರ್, ಸಣ್ಣ ನೀರಾವರಿ ಇಲಾಖೆ ಅಭಿಯಂತ ನರೇಂದ್ರಬಾಬು, ತಹಸೀಲ್ದಾರ್ ನಾಗಪ್ರಶಾಂತ್ ಇತರರಿದ್ದರು.