ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಅಂಗವಿಕಲರು ಬೇರೆ ವಿದ್ಯಾರ್ಥಿಗಳೊಂದಿಗೆ ಹೋಲಿಕೆ ಮಾಡಿಕೊಳ್ಳಬಾರದು. ಕೀಳರಿಮೆ ಬಿಟ್ಟು, ಜೀವನದಲ್ಲಿ ಜಿಗುಪ್ಸೆ ಹೊಂದದೆ, ಆತ್ಮ ವಿಶ್ವಾಸದಿಂದ ಮುನ್ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಿಮ್್ಸ-ಆಶಾಕಿರಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನಗರದ ಇಂದಿರಾ ಗಾಜಿನ ಮನೆಯಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ಪ್ರತಿಭಾವಂತ ಅಂಗವಿಕಲ ಮಕ್ಕಳ ಸಾಂಸ್ಕೃತಿಕ ಚಟುವಟಿಕೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನುವಂಶಿಕ, ಪೋಲಿಯೋ ಹಾಗೂ ಇತರ ಕಾಯಿಲೆಗಳಿಂದ ಅಂಗವಿಕಲರಾಗಿರುತ್ತಾರೆ. ಎಂದಿಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಅವರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಬೇಕು. ಅವರಲ್ಲಿನ ಪ್ರತಿಭೆ ಹೊರಹಾಕಲು ಮುಂದಾಗಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಅಂಗವಿಕಲರಿಗೆ ತಲುಪಿಸುವ ಕೆಲಸಗಳಾಗಬೇಕು ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಂಗವಿಕಲ ಬಾಲಕ-ಬಾಲಕಿಯರ ವಸತಿಯುತ ಶಾಲೆ ಅಧ್ಯಕ್ಷ ಐ.ಕೆ. ಲಕ್ಕುಂಡಿ, ಅಂಗವಿಕಲರಿಗೆ ವಿವಿಧ ಸವಲತ್ತು ಹಾಗೂ ಬೇಡಿಕೆಗಳನ್ನು ನೀಡುವುದರ ಕುರಿತು ಮಾತನಾಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಶರಶೆಟ್ಟಿ, ನಿವೃತ್ತ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ, ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಶ್ರೀರಾಮುಲು ಇತರರು ಇದ್ದರು.
ಅಂಧ ಬಾಲಕರ ಸರ್ಕಾರಿ ಪಾಠಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಎಚ್.ಎಚ್. ಕುಕನೂರ ಸ್ವಾಗತಿಸಿದರು. ಶಿಕ್ಷಕ ಅಣ್ಣಪ್ಪ ಕೋಳಿ ವಂದಿಸಿದರು.