ಗೋಣಿಕೊಪ್ಪ; ಕೀರೆಹೊಳೆ ಸಂರಕ್ಷಣೆಗೆ ಯೋಜನೆ ರೂಪಿಸಲು ಕಾವೇರಿ ಜಲಮೂಲ ಹೋರಾಟ ಸಂರಕ್ಷಣಾ ಅಭಿವೃದ್ಧಿ ವೇದಿಕೆ ತೀರ್ಮಾನಿಸಿದೆ.
ಇಲ್ಲಿನ ಸಿಲ್ವರ್ ಸ್ಕೈ ಸಭಾಂಗಣದಲ್ಲಿ ವೇದಿಕೆ ವತಿಯಿಂದ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತ್ತಲ್ಲದೇ, ಗ್ರಾಮ ಪಂಚಾಯಿತಿ ಸದಸ್ಯರ ಸಭೆ ಕರೆದು ಜಾಗೃತಿ ಮೂಡಿಸುವುದು, ಸದಸ್ಯತ್ವ ಅಭಿಯಾನ, ಕಾನೂನು ಸಲಹೆಗಾರರ ನೇಮಕ, ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಭೇಟಿ, ಕಾವೇರಿ ನೀರಾವರಿ ನಿಗಮಕ್ಕೆ ಭೇಟಿ ನೀಡುವ ಕುರಿತು ಚರ್ಚಿಸಲಾಯಿತು.
ಪ್ರಭಾರ ಅಧ್ಯಕ್ಷರಾಗಿ ಟಿ.ಎಲ್.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯಾಗಿ ತುಷಾರ್ ಎಚ್.ಕುಲಕರ್ಣಿ, ಖಜಾಂಚಿಯಾಗಿ ವಿ.ಎಲ್. ಆನಂದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಟಿ. ಎಲ್.ಶ್ರೀನಿವಾಸ್ ಮಾತನಾಡಿ, ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಯತ್ನದಿಂದಾಗಿ ಗೋಣಿಕೊಪ್ಪ ಕೀರೆಹೊಳೆ ಹಾಗೂ ಕೈಕೇರಿ ತೋಡು ರಾಜಕಾಲುವೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಯಿಂದ 9 ಕೋಟಿ ರೂ. ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ. ಕಂದಾಯ ಇಲಾಖೆ ಬಫರ್ ಜೋನ್ ಗುರುತು ಮಾಡಬೇಕಾಗಿದ್ದು, ರಾಜಕಾಲುವೆ ನಿರ್ಮಿಸುವ ಮೂಲಕ ಕೀರೆಹೊಳೆ ಪ್ರವಾಹವನ್ನು ನಿಯಂತ್ರಣ ಮಾಡಬಹುದಾಗಿದೆ. ಜನದಟ್ಟಣೆ ದಿನೇ ದಿನೆ ಅಧಿಕವಾಗುತ್ತಿದ್ದು, ಅನೈರ್ಮಲ್ಯ ಹೆಚ್ಚಾಗುತ್ತಿದೆ. ಜಲಮೂಲಗಳು ಕಲುಷಿತಗೊಂಡು ವಿಷಕಾರಿಯಾಗುತ್ತಿರುವುದು ಆತಂಕಕಾರಿ. ಜಲಮೂಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕಾಗಿದೆ ಎಂದರು.
ನಿಕಟಪೂರ್ವ ಅಧ್ಯಕ್ಷ ಪುಳಿಂಜನ ಪೂವಯ್ಯ, ಗೌರವಾಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ, ಪ್ರಧಾನ ಕಾರ್ಯದರ್ಶಿ ತುಷಾರ್ ಕುಲಕರ್ಣಿ, ಖಜಾಂಚಿ ಆನಂದ್, ಉಪಾಧ್ಯಕ್ಷ ಟಾಟು ಮೊಣ್ಣಪ್ಪ, ಪಡಿಕಲ್ ಕುಸುಮಾವತಿ, ನಿರ್ದೇಶಕರಾದ ನಾಮೇರ ದೇವಯ್ಯ, ಕೆ.ಪಿ.ಅಬ್ದುಲ್ ಜಲೀಲ್, ಟಿ.ಕೆ. ಖಾಲಿದ್, ಪಂಚಮಿ ಇದ್ದರು.