ಜಿ.ಕೆ.ಸುಗ್ಗರಾಜು ನೆಲಮಂಗಲ
ರೈತರಿಗೆ ನಿಶ್ಚಿತ ಆದಾಯ ಯೋಜನೆಯಡಿ ಆರಂಭಗೊಂಡ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ತಾಲೂಕಿನಲ್ಲಿ ಇ-ಕೆವೈಸಿ ಆಗದ ಕಾರಣಕ್ಕೆ ಶೇ. 42 ರೈತರು ಸಹಾಯಧನದಿಂದ ವಂಚಿತರಾಗುವಂತಾಗಿದೆ.
ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯನ್ನು 2018ರ ಡಿಸೆಂಬರ್ 1ರಿಂದ ಆರಂಭಿಸಿದೆೆ. ಫಲಾನುಭವಿ ರೈತನಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ.ಗಳಂತೆ ಒಂದು ವರ್ಷಕ್ಕೆ 3 ಬಾರಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ 6 ಸಾವಿರ ರೂ. ಜಮೆ ಮಾಡಲಾಗುತ್ತಿದೆ. ತಾಲೂಕಿನಾದ್ಯಂತ ಒಟ್ಟು 16,980 ಅರ್ಹ ಫಲಾನುಭವಿಗಳಾಗಿದ್ದು 9,841 ಮಂದಿ ಇ-ಕೆವೈಸಿ ಮಾಡಿಸಿಕೊಂಡಿದ್ದು, 7,139 ರೈತರು ಇ-ಕೆವೈಸಿ ಮಾಡಿಸುವುದು ಬಾಕಿಯಿದೆ. ಈಗಾಗಲೇ ಆರ್ಹರಿಗೆ 12 ಕಂತುಗಳಲ್ಲಿ ಖಾತೆಗೆ ಹಣ ವರ್ಗಾವಣೆಯಾಗಿದ್ದು, 13ನೇ ಕಂತು ಬರುವುದು ಬಾಕಿಯಿದೆ.
ಸಮಸ್ಯೆಗೆ ಕಾರಣವೇನು…:ರೈತರು ಕಿಸಾನ್ ಸಮ್ಮಾನ್ ಹಣ ಪಡೆಯಲು ಈ ಸಾರಿ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಆದರೆ ರೈತರ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಲಿಂಕ್ ಇಲ್ಲದೆ ಇ-ಕೆವೈಸಿ ಮಾಡಲು ಸಾಧ್ಯವಿಲ್ಲ. ಬಹುತೇಕ ರೈತರ ಆಧಾರ್‌ಗೆ ಮೊಬೈಲ್ ನಂಬರ್ ಲಿಂಕ್ ಆಗಿಲ್ಲ. ಇದು ಇ-ಕೆವೈಸಿ ಪ್ರಕ್ರಿಯೆ ವಿಳಂಬವಾಗುವಂತೆ ಮಾಡಿದೆ. ಇನ್ನೂ ಕೆಲ ರೈತರ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೂ ಅವರ ಹತ್ತಿರ ಈಗ ಆ ಮೊಬೈಲ್ ನಂಬರ್ ಇಲ್ಲ. ಈ ಕಾರಣದಿಂದ ಅನೇಕ ರೈತರು ಪ್ರೋತ್ಸಾಹಧನದಿಂದ ವಂಚಿತವಾಗುವಂತಾಗಿದೆ.
ರೈತರು ಆಧಾರ್‌ಕಾರ್ಡ್ (ಮೊಬೈಲ್ ಸಂಖ್ಯೆ ಲಿಂಕ್ ಮಾಡಿರುವ), ಜಮೀನಿನ ಪಹಣಿ, ಬ್ಯಾಂಕ್ ಪಾಸ್‌ಬುಕ್ ನೀಡಿ ಎಫ್‌ಐಡಿ (ಫಾರ್ಮರ್ಸ್ ಯುನಿಕ್ ಐಡಿ) ಮಾಡಿಸಬೇಕು. ತಾಲೂಕಿನಲ್ಲಿ ಜಮೀನು ಹೊಂದಿದ್ದು, ರೈತರು ಬೇರೆ ಕಡೆ ವಾಸ ಮಾಡುತ್ತಿದ್ದಾರೆ. ಜತೆಗೆ ಕೆಲವರು ಜಮೀನು ಮಾರಾಟ ಮಾಡಿದ್ದು ನೋಂದಣಿ ಮಾಡಿಸಿಲ್ಲ. ಈ ಕಾರಣದಿಂದಲೂ ಕೆಲವು ರೈತರದ್ದು ಇ-ಕೆವೈಸಿ ಆಗುತ್ತಿಲ್ಲ.
ಸೌಲಭ್ಯ ಪಡೆಯಲು ಇ-ಕೆವೈಸಿ ಕಡ್ಡಾಯ: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಸದುಪಯೋಗಕ್ಕೆ ಇ-ಕೆವೈಸಿ ಕಡ್ಡಾಯವಾಗಿದೆ. ಆದಾಯ ತೆರಿಗೆ ಕಟ್ಟುವವರು, ನಿವೃತ್ತ, ಹಾಲಿ ಸರ್ಕಾರಿ ನೌಕರರು ಸೇರಿ ಅನೇಕ ಅನರ್ಹರು ಯೋಜನೆಯ ಪ್ರಯೋಜನ ಪಡೆಯುವುದನ್ನು ತಪ್ಪಿಸುವ ಉದ್ದೇಶದಿಂದ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ರೈತ ಸಂಪರ್ಕ ಕೇಂದ್ರ, ನಾಗರಿಕ ಸೇವಾ ಕೇಂದ್ರ, ಗ್ರಾಮ ಒನ್ ಸೇರಿದಂತೆ ಖಾಸಗಿ ಕಂಪ್ಯೂಟರ್ ಕೇಂದ್ರ (ಸೈಬರ್)ಗಳಲ್ಲಿ ಇ-ಕೆವೈಸಿ ಮಾಡಿಸಬಹುದಾಗಿದೆ. ಈ ಬಗ್ಗೆ ಕೃಷಿ ಇಲಾಖೆಯಿಂದ ಗ್ರಾಮಸಭೆಗಳಲ್ಲಿ ಹಾಗೂ ವಿವಿಧ ಸರ್ಕಾರಿ ಕಾರ್ಯಕ್ರಮದಲ್ಲಿ ಸಾಕಷ್ಟು ಬಾರಿ ಜಾಗೃತಿ ಮೂಡಿಸಲಾಗಿದೆ. ರಾಜ್ಯ ಸರ್ಕಾರದ ಇ-ಆಡಳಿತದ ಶಾಖೆಯಿಂದ ಬಾಕಿ ಉಳಿದಿರುವ ರೈತರಿಗೆ ಕರೆ ಮಾಡಿ ಇ-ಕೆವೈಸಿ ಮಾಡುವ ವಿಧಾನ ತಿಳಿಸಲಾಗಿದೆ. ರೈತರು ಇ-ಕೆವೈಸಿ ಮಾಡಿಕೊಂಡಲ್ಲಿ ಮಾತ್ರ ಅವರ ಖಾತೆಗೆ ಯೋಜನೆಯ ಹಣ ನೇರವಾಗಿ ಜಮೆಯಾಗಲಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಾಘವೇಂದ್ರ ತಿಳಿಸಿದ್ದಾರೆ.