ಮೈಸೂರು: ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿ.19ರಂದು ಭಾರತೀಯ ಕಿಸಾನ್ ಸಂಘದಿಂದ ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ.
ಕೃಷಿ ಯತ್ರೋಪಕರಣಗಳು, ಕೃಷಿ ಪರಿಕರ, ಹನಿ ನೀರಾವರಿ ಸೇರಿದಂತೆ ರೈತರು ಬಳಸುವ ಪರಿಕರಗಳಿಗೆ ಜಿ.ಎಸ್.ಟಿ ರದ್ದುಗೊಳಿಸಬೇಕು. ಎಲ್ಲ ರೈತಪರಿಕರಗಳನ್ನು ಮುಕ್ತ ಮಾರುಕಟ್ಟೆಗೆ ಬಿಟ್ಟು ರೈತ ಪಡೆದ ವಸ್ತುಗಳಿಗೆ ಸಬ್ಸಿಡಿ ಹಣವನ್ನು ನೇರ ವರ್ಗಾವಣೆ ಮಾಡಬೇಕು ಎನ್ನುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಲಿನ ದರ ಆದಾಯಕ್ಕಿಂತ ವೆಚ್ಚವೇ ದುಬಾರಿ ಆಗಿರುವುದರಿಂದ ಖರೀದಿ ಬೆಲೆ ಹೆಚ್ಚಳ ಮಾಡಬೇಕು, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ವೈಯಕ್ತಿಕವಾಗಿ ಕಟ್ಟಲು ಅನುಕೂಲವಾಗುವಂತೆ ಮತ್ತು ಆಯಾ ಋತುಮಾನದಲ್ಲೇ ಪರಿಹಾರ ನೀಡಬೇಕು. ಕಬ್ಬು ದರ ಪರಿಷ್ಕರಿಸಿ 4 ಸಾವಿರ ರೂ. ನಿಗದಿ ಮಾಡಬೇಕು. ಅಕ್ರಮ-ಸಕ್ರಮ ಜಮೀನಿಗೆ ತ್ವರಿತವಾಗಿ ಹಕ್ಕುಪತ್ರ ನೀಡಬೇಕು ಎನ್ನುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಗುವುದು ಎಂದು ಹೇಳಿದರು.
ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ರವಿ ಗಂಡತ್ತೂರು ಇತರರು ಇದ್ದರು.