ಜಿಲ್ಲೆ

ಕಿಲಗೆರೆ ಗ್ರಾಮದಲ್ಲಿ ಚಂದ್ರಮಂಡಲ

ಚಾಮರಾಜನಗರ: ತಾಲೂಕಿನ ಕಿಲಗೆರೆ ಗ್ರಾಮದ ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಚಂದ್ರಮಂಡಲೋತ್ಸವ ಆಚರಣೆ ಮಾಡಲಾಯಿತು.

ಗ್ರಾಮದ ದೇವಾಲಯದಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ದೊಡ್ಡಮ್ಮತಾಯಿ, ರಾಚಪ್ಪಾಜಿ, ಚೆನ್ನಾಜಮ್ಮ ದೇವರುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ದೇವಾಲಯದ ಸುತ್ತ ಮಂಗಳವಾದ್ಯ, ತಮಟೆ ಮೇಳಗಳೊಂದಿಗೆ ಕಂಡಾಯ ಮೆರವಣಿಗೆ ಮಾಡಿ, ದೇವಸ್ಥಾನದ ಮುಂಭಾಗ ಬಿದಿರಿನಿಂದ ಚಂದ್ರಾಕಾರದಲ್ಲಿ ಕಟ್ಟಿದ ಮಂಡಲಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಆ ಚಂದ್ರಮಂಡಲವು ಪಶ್ಚಿಮ ದಿಕ್ಕಿಗೆ ಧಗ ಧಗನೆ ಹತ್ತಿ ಉರಿಯಿತು. ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬಂದಿದ್ದಂತಹ ಭಕ್ತಾದಿಗಳು ಚಂದ್ರಮಂಡಲಕ್ಕೆ ತಾವು ತಂದಿದ್ದಂತಹ ದವಸ ಧಾನ್ಯಗಳನ್ನು ಎರಚಿ ಭಕ್ತಿ ಪರಾಭವ ಮೆರೆದರು.

ನಂತರ ದೇವಸ್ಥಾನದಲ್ಲಿ ಪ್ರಸಾದ ವಿತರಣೆ ಮಾಡಲಾಯಿತು. ಅಕ್ಕಪಕ್ಕದ ಗ್ರಾಮಗಳಿಂದಲೂ ಸಹ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.