ಜಿಲ್ಲೆ

ಕಿರುಚಿತ್ರದಲ್ಲಿ ವಿದುರಾಶ್ವತ್ಥದ ಸಂಗ್ರಾಮ ; ಕರ್ನಾಟಕದ ಜಲಿಯನ್ ವಾಲಾಬಾಗ್ ನೈಜ ಘಟನೆ ಆಧರಿತ ನೈಜ ಚಿತ್ರ ನಿರ್ಮಾಣ

ಗೌರಿಬಿದನೂರು: ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಇತಿಹಾಸದ ಪುಟದಲ್ಲಿ ದಾಖಲಾಗಿರುವ ‘ವಿದುರಾಶ್ವತ್ಥದ ಸ್ವಾತಂತ್ರ್ಯ ಕಹಳೆ’ ಕಿರುಚಿತ್ರದಲ್ಲಿ ಮೊಳಗಲಿದೆ. 1938ರಲ್ಲಿ ಉತ್ತರಪಿನಾಕಿನಿ ನದಿ ತಟದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ, ಮಾರಣಹೋಮ ಕುರಿತು ಕಿರುಚಿತ್ರ ನಿರ್ಮಾಣಕ್ಕೆ ಉದ್ಯಮಿ ಕೆ.ಎಚ್.ಪುಟ್ಟಸ್ವಾಮಿಗೌಡ ಮುಂದಾಗಿದ್ದಾರೆ.

1912ರಲ್ಲಿ ಶಿವಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹದಿಂದ ಪ್ರೇರಣೆಗೊಂಡು ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರು 1938ರ ಏ.25ರಂದು ವಿದುರಾಶ್ವತ್ಥದಲ್ಲಿ ಧ್ವಜಸತ್ಯಾಗ್ರಹ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ವಿದುರಾಶ್ವತ್ಥದಲ್ಲಿ ಜಾತ್ರೆ ಸಹ ನಡೆಯುತ್ತಿದ್ದರಿಂದ ಸಾವಿರಾರು ಮಂದಿ ಸೇರಿದ್ದರು. ನಿಷೇಧಾಜ್ಞೆ ನಡುವೆಯೂ ಸ್ವಾತಂತ್ರ್ಯದ ಧ್ವಜಾರೋಹಣ ನೆರವೇರಿಸಿದ್ದರಿಂದ ಕುಪಿತಗೊಂಡ ಬ್ರಿಟಿಷ್ ಅಧಿಕಾರಿಗಳು ಗೋಲಿಬಾರ್‌ಗೆ ಆದೇಶಿಸಿದರು, ದುರ್ಘಟನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾರ್ವಜನಿಕರು ಸೇರಿ 30ಕ್ಕೂ ಹೆಚ್ಚು ಮಂದಿ ಪ್ರಾಣತೆತ್ತರು. ನೂರಾರು ಮಂದಿ ತೀವ್ರ ಸ್ವರೂಪದಲ್ಲಿ ಗಾಯಗೊಂಡರು.

ಆದರೆ ಬ್ರಿಟಿಷ್ ಸರ್ಕಾರ ಸಾವು-ನೋವುಗಳ ಬಗ್ಗೆ ತಪ್ಪು ಮಾಹಿತಿ ನೀಡಿ ಸ್ವಾತಂತ್ರ್ಯ ಹೋರಾಟಗಾರರ ದಿಕ್ಕುತಪ್ಪಿಸುವ ಹಾಗೂ ಸತ್ಯಾಗ್ರಹವೇ ತಪ್ಪು ಎಂಬಂತೆ ಬಿಂಬಿಸುವ ಕೆಲಸ ಮಾಡಿತ್ತು. ಈ ಘಟನೆ ಕರ್ನಾಟಕದ ಜಲಿಯನ್ ವಾಲಾಬಾಗ್ ದುರಂತ ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಕಿರುಚಿತ್ರ ಅರ್ಪಣೆ: ಈ ಘಟನೆಯನ್ನೇ ಆಧರಿಸಿ ಕಿರುಚಿತ್ರ ನಿರ್ಮಾಣ ಮಾಡಿ ನವ ಪೀಳಿಗೆಗೆ ವಿದುರಾಶ್ವತ್ಥದ ಹೋರಾಟ ಹಾಗೂ ಹುತಾತ್ಮರನ್ನು ಪರಿಚಯ ಮಾಡಿಕೊಡುವ ಉದ್ದೇಶದಿಂದ ‘ಕರ್ನಾಟಕ ಜಲಿಯನ್ ವಾಲಾಬಾಗ್ (ನೈಜ ಘಟನೆ)’ ಎಂಬ ಹೆಸರಿನಲ್ಲಿ ಕಿರುಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಸ್ಥಳೀಯ ಉದ್ಯಮಿ ಕೆ.ಎಚ್.ಪುಟ್ಟಸ್ವಾಮಿಗೌಡ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು ವಾಗೀಶ್ ಆರ್.ಕಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಸ್ಥಳೀಯ ಕಲಾವಿದರನ್ನೇ ಕಿರುಚಿತ್ರಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

ವಿದುರಾಶ್ವತ್ಥದ ಸ್ವಾತಂತ್ರ್ಯ ಹೋರಾಟ ಚರಿತ್ರೆಯಲ್ಲಿ ದಾಖಲಾಗಿರುವ ಘಟನೆ. ತ್ಯಾಗ-ಬಲಿದಾನ ಮಾಡಿದವರ ಹಾಗೂ ಸ್ವಾತಂತ್ರ್ಯ ಹೋರಾಟದ ಸಾಹಸಗಾಥೆಯ ಬಗ್ಗೆ ಯುವ ಪೀಳಿಗೆ ತಿಳಿದುಕೊಳ್ಳಬೇಕು. ದೇಶ ಪ್ರೇಮ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕಿರುಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಕೆ.ಎಚ್.ಪುಟ್ಟಸ್ವಾಮಿಗೌಡ, ಕಿರುಚಿತ್ರದ ನಿರ್ಮಾಪಕ