ಜೇವರ್ಗಿ: ಫೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿ, ಹುಡಗಿ ಮನೆಯವರು ಕಿರುಕುಳದಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಮೂಲತಃ ತಾಲೂಕಿನ ಚನ್ನೂರ ಗ್ರಾಮದ ಸದ್ಯಕ್ಕೆ ಬಸವೇಶ್ವರ ಕಾಲನಿಯಲ್ಲಿ ವಾಸವಾಗಿದ್ದ ರಘುವೀರ ಚನ್ನೂರ (೧೯) ಆತ್ಮಹತ್ಯೆಗೆ ಶರಣಾದವ. ಪಟ್ಟಣದ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ.
ರಘುವೀರ ಹಾಗೂ ಯುವತಿಯೊಬ್ಬಳು ಪ್ರೀತಿಸುತ್ತಿದ್ದರು. ಒಮ್ಮೆ ಇಬ್ಬರು ಮನೆ ಬಿಟ್ಟು ಹೋಗಿದ್ದರು. ಬಳಿಕ ಎರಡೂ ಕುಟುಂಬದವರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದರು. ಇಷ್ಟಾದರೂ ಯುವತಿ ಮನೆಯವರು ಯವಕನ ಮನೆಯವರಿಗೆ ಹಣದ ಬೇಡಿಕೆ ಇಟ್ಟಿದ್ದರಿಂದ ೩,೫೦,೦೦೦ ರೂ. ನೀಡಿದ್ದರು. ಆದರೆ ೧೫ ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಇದರಿಂದ ಎರಡು ಕುಟುಂಬಗಳ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ಯುವತಿ ಮನೆಯವರು ರಘುವೀರ ವಿರುದ್ಧ ಫೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ. ಇದರಿಂದಾಗಿ ಮನನೊಂದು ಪಟ್ಟಣದ ಹೊರವಲಯದ ಜಮೀನೊಂದರ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗನ ಆತ್ಮಹತ್ಯೆಗೆ ಯುವತಿ ಕುಟುಂಬದವರಾದ ವಿಜಯಲಕ್ಷ್ಮೀ, ಮಹಾದೇವಪ್ಪ, ಶ್ವೇತಾ, ಸಿದ್ದಾರೂಢ, ಮಲ್ಲಿಕಾರ್ಜುನ, ಸವಿತಾ ಎಂಬುವವರೇ ಕಾರಣ ಎಂದು ಜೇವರ್ಗಿ ಠಾಣೆಯಲ್ಲಿ ತಾಯಿ ದೂರು ದಾಖಲಿಸಿದ್ದಾರೆ.
ಕುರುಬ ಸಮಾಜದಿಂದ ಮಿಂಚಿನ ಪ್ರತಿಭಟನೆ: ಕಿರುಕುಳದಿಂದ ಬೇಸತ್ತು ಯುವಕ ರಘುವೀರ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಸುದ್ದಿ ಹರಡುತ್ತಿದ್ದಂತೆ ಕುರುಬ ಸಮಾಜದವರು ಜೇವರ್ಗಿಯ ಬಸವೇಶ್ವರ ವೃತ್ತದಲ್ಲಿ ಜಮಾಗೊಂಡು ಸಂಚಾರ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಮಿಂಚಿನ ಪ್ರತಿಭಟನೆ ನಡೆಸಿದರು.ಯುವತಿ ಮನೆಯವರ ಕಿರುಕುಳ ಹಾಗೂ ಬೆದರಿಕೆಯಿಂದಲೇ ರಘುವೀರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇವರದ್ದು ಬಡ ಕುಟುಂಬವಾಗಿದ್ದು, ತಂದೆಯಿಲ್ಲ. ತಾಯಿಯೇ ಕುಟುಂಬಕ್ಕೆ ಮೂಲ. ರಘುವೀರ ಬೇಕರಿಯಲ್ಲಿ ಕೆಲಸ ಮಾಡಿ ಕುಟುಂಬ ಸಾಗಿಸುತ್ತಿದ್ದ. ಇದೀಗ ಅವನು ದೂರವಾಗಿದ್ದಾನೆ. ಆತ್ಮಹತ್ಯೆಗೆ ಕಾರಣವಾದವರನ್ನು ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಸುಳ್ಳು ಪ್ರಕರಣ ವಾಪಸ್ ಪಡೆಯಬೇಕು. ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ಸಾಯಬಣ್ಣ ದೊಡ್ಡಮನಿ, ಶರಣಗೌಡ ಸರಡಗಿ, ಚಂದ್ರಶೇಖರ ನೇರಡಗಿ, ರಾಜಶೇಖರ ಮುತ್ತಕೋಡ, ರೇವಣಸಿದ್ದಪ್ಪ ಸಂಕಾಲಿ, ನಿಂಗಣ್ಣ ರz್ದೆÃವಾಡಗಿ, ಭೀಮರಾಯ ಖಾದ್ಯಾಪುರ, ಮಹೇಶ ಕೆಂಭಾವಿ, ಸಿದ್ದಲಿಂಗ ಪೂಜಾರಿ, ಶಿವಲಿಂಗ ಶಿಂಘೆ, ಸಾಯಿಬಣ್ಣ ಪೂಜಾರಿ, ಮಾನಪ್ಪ ಗೋಗಿ, ರಾಜು ಪೂಜಾರಿ, ಮಲ್ಕಣ್ಣ ಪೂಜಾರಿ, ರೇಣುಕಾ ಕೊಂಬಿನ್, ಬಸವರಾಜ ಹಡಪದ, ಸಿದ್ದು ಗಜ, ಪ್ರಕಾಶ ಪಾಟೀಲ, ಮಹಾದೇವಿ, ನಿಂಗು ಗಜ ಇತರರಿದ್ದರು.
ಮೃತದೇಹವಿಟ್ಟು ಹೋರಾಟ: ಜೇವರ್ಗಿ ಠಾಣೆಯಲ್ಲಿ ದೂರು ನೀಡಿದ ಬಳಿಕ ಯುವಕನ ಮೃತದೇಹದೊಂದಿಗೆ ಸರ್ಕಾರಿ ಆಸ್ಪತ್ರೆ ಎದುರು ಕುಟುಂಬಸ್ಥರು ಹಾಗೂ ಕುರುಬ ಸಮಾಜದ ಮುಖಂಡರು ಪ್ರತಿಭಟನೆಗೆ ಕುಳಿತರು. ಆತ್ಮಹತ್ಯೆಗೆ ಕಾರಣ ಆದವರನ್ನು ಬಂಧಿಸುವವರೆಗೆ ಅಂತ್ಯಕ್ರಿಯೆ ನಡೆಸಲ್ಲ, ಸ್ಥಳ ಬಿಟ್ಟು ಕದಲಲ್ಲ ಎಂದು ಪಟ್ಟು ಹಿಡಿದರು. ಡಿವೈಎಸ್‌ಪಿ ಲೋಕೇಶ, ಸಿಪಿಐ ರಾಜೇಸಾಬ್ ನದಾಫ್, ಪಿಎಸ್‌ಐ ಗಜಾನಂದ ಬಿರಾದಾರ ಭೇಟಿ ನೀಡಿ ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆದರು.