ಜಿಲ್ಲೆ

ಕಿರು ಸೇತುವೆ ಮೇಲೆ ಜೀವಭಯದಲ್ಲಿ ಸಂಚಾರ

ಕವಿತಾಳ: ತುಂಗಭದ್ರಾ ಎಡದಂಡೆ ಮುಖ್ಯನಾಲೆಗೆ ಇರಕಲ್ ಹತ್ತಿರ ಇರಕಲ್, ತೋರಣದಿನ್ನಿ, ಚಿಲ್ಕರಾಗಿ, ಬಸ್ಸಾಪೂರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಕಿರು ಕಬ್ಬಿಣದ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆ ತಳಪಾಯದ ಸರಳುಗಳು ಮುರಿದಿದ್ದು, ಜನರು ಜೀವ ಭಯದಿಂದ ಸೇತುವೆಯನ್ನು ದಾಟುವಂತಾಗಿದೆ.

25 ವರ್ಷಗಳ ಹಿಂದೆ ಕಬ್ಬಿಣದಿಂದ ನಿರ್ಮಿಸಿರುವ ಈ ಸೇತುವೆ ತುಕ್ಕು ಹಿಡಿದಿದ್ದು, ತಳಪಾಯಗಳು ಮುರಿದಿರುವುರಿಂದ ಸೇತುವೆ ಅಪಾಯಲ್ಲಿದೆ. ಈ ಸೇತುವೆ ಪಕ್ಕದಲ್ಲಿ 2023ರ ಫೆಬ್ರವರಿಯಿಂದ ಹೊಸ ಸೇತುವೆ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ನನೆಗುದಿಗೆ ಬಿದ್ದಿದೆ.

ಈಗಿರುವ ಕಬ್ಬಿಣದ ಸೇತುವೆ ಕಾಲುದಾರಿಯಾಗಿದ್ದು, ದ್ವಿಚಕ್ರ ವಾಹನಗಳು ಕೂಡ ಸಂಚರಿಸುತ್ತಿದ್ದವು. ಕುರಿ, ದನಗಳನ್ನು ಮೇಯಿಸಲು ಸೇತುವೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಜನರು ಹೋಗುತ್ತಾರೆ. ಇತ್ತೀಚಿಗೆ ದನಗಳು ಸೇತುವೆ ದಾಟುವಾಗ ಸೇತುವೆ ಕುಸಿದಿದ್ದು, ರೈತರು ದನಗಳು ನಾಲೆಯಲ್ಲಿ ಬೀಳದಂತೆ ತಡೆದಿದ್ದಾರೆ. ಸೇತುವೆ ದುಸ್ಥಿತಿಯಲ್ಲಿದ್ದರೂ ನಾಲೆಯಲ್ಲಿ ನೀರು ಕಡಿಮೆ ಇರುವುದರಿಂದ ಸಂಚಾರ ಮುಂದುವರಿದಿದೆ.

ಅಪಾಯದಲ್ಲಿರುವ ಸೇತುವೆ ತೆರವುಗೊಳಿಸಿ ಹೊಸ ಸೇತುವೆ ಕಾಮಗಾರಿ ಬೇಗ ಮುಗಿಸಿ ತೋರಣದಿನ್ನಿ, ಬಸ್ಸಾಪೂರ, ಇರಕಲ್, ಚಿಲ್ಕರಾಗಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು ಎಂದು ರಂಗನಗೌಡ ಇರಕಲ್, ಶ್ರೀನಿವಾಸ, ದೇವಣ್ಣ ಕುರಬರ, ಈರಣ್ಣ ಇರಕಲ್, ಶರಣಬಸವ ಕುಂಬಾರ ಚಿಲ್ಕರಾಗಿ, ರಮೇಶ ಚಿಲ್ಕರಾಗಿ, ಶರಣಪ್ಪ ನಾಯಕ ತೋರಣದಿನ್ನಿ, ಹನುಮಂತ ತೋರಣದಿನ್ನಿ, ಶಿವಕುಮಾರ ಬಸ್ಸಾಪೂರ, ಮೌಲಸಾಬ್ ಬಸ್ಸಾಪೂರ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.