ಜಿಲ್ಲೆ

ಕಿರೀಸಾವೆ ಕೆರೆಗೆ ಬಾಗಿನ ಸಮರ್ಪಣೆ

Hassan

ಚನ್ನರಾಯಪಟ್ಟಣ: ಕೆರೆ-ಕಟ್ಟೆಗಳು ತುಂಬಿದರೆ ಮಾತ್ರ ಕೃಷಿ ಚಟುವಟಿಕೆಯೊಂದಿಗೆ ರೈತರ ಬದುಕು ಹಸನಾಗಲು ಸಾಧ್ಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ ಹೇಳಿದರು.

ತಾಲೂಕಿನ ಕಿರೀಸಾವೆ ಗ್ರಾಮದಲ್ಲಿ 25 ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿರುವ ಕೆರೆಗೆ ಸೋಮವಾರ ಗಂಗೆಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಮಾತನಾಡಿ, ರೈತ ವರ್ಗ ಅಭಿವೃದ್ಧಿ ಹೊಂದಿದರೆ ದೇಶ ಪ್ರಗತಿ ಕಾಣಲಿದೆ ಎಂದರು.

ಈ ಬಾರಿ ಪೂರ್ವ ಮುಂಗಾರಿನಿಂದಲೂ ತಾಲೂಕು ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಸುರಿದಿದ್ದು ಕೃಷಿ ಜಮೀನು ಜಲಾವೃತಗೊಂಡ ಪರಿಣಾಮ ಬೆಳೆ ಹಾನಿಯಾಗಿದೆ. ಮನೆಗಳ ಗೋಡೆ ಕುಸಿದಿದ್ದು ಕುಟುಂಬಗಳು ಬೀದಿಗೆ ಬಂದಿವೆ. ರಸ್ತೆ ಹಾಳಾಗಿವೆ. ಸಾಕಷ್ಟು ನಷ್ಟವಾಗಿದೆ ಎಂದು ತಿಳಿಸಿದರು.

ಈಗಾಗಲೇ ಸರ್ಕಾರ ಇಂತಹ ಪ್ರಕರಣಗಳಿಗೆ ಇಂತಿಷ್ಟು ಎಂದು ಸೂಕ್ತ ಪರಿಹಾರ ಘೋಷಿಸಿದ್ದು ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕಿದೆ. ಮಳೆ ಹಾನಿಗೆ ಒಳಗಾಗಿ ನಷ್ಟ ಅನುಭವಿಸಿರುವ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಪರಿಹಾರ ಕಲ್ಪಿಸಬೇಕೇ ಹೊರತು ನಿರ್ಲಕ್ಷಿಸಬಾರದು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಎಪಿಎಂಸಿ ನಿರ್ದೇಶಕ ಎಂ.ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ಮಂಜೇಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ಯಾಮಲಾ ಉದಯಕುಮಾರ್, ಯುವ ಮುಖಂಡ ಯುವರಾಜ್ ಇದ್ದರು.