ಬೆಳಗಾವಿ ನಗರದಲ್ಲಿ ಶನಿವಾರ ಸಂಸದೆ ಮಂಗಲ ಅಂಗಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಜಯ ಪಾಟೀಲ ಇತರರಿದ್ದರು. 
ಜಿಲ್ಲೆ

ಕಿತ್ತೂರು ರೈಲ್ವೆ ಮಾರ್ಗಕ್ಕೆ 20 ಕೋಟಿ ರೂ. ಬಿಡುಗಡೆ

ಬೆಳಗಾವಿ: ಧಾರವಾಡ-ಕಿತ್ತೂರು- ಬೆಳಗಾವಿ ನೂತನ ರೈಲ್ವೆ ಮಾರ್ಗದ ಯೋಜನೆಗೆ ಕೇಂದ್ರ ಸರ್ಕಾರವು 2022-23ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದು, 20 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಂಸದೆ ಮಂಗಲ ಅಂಗಡಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ-ಕಿತ್ತೂರು- ಬೆಳಗಾವಿ ನೂತನ ರೈಲ್ವೆ ಮಾರ್ಗದ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ನಿಗದಿತ ಸಮಯದಲ್ಲಿಯೇ ಯೋಜನೆ ಪೂರ್ಣಗೊಳ್ಳಲಿದೆ. ಈ ನೂತನ ರೈಲ್ವೆ ಯೋಜನೆಗೆ ರೈತರು ವಿರೋಧ ವ್ಯಕ್ತಪಡಿಸಿಲ್ಲ. ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಯುತ ಪರಿಹಾರ ಕೊಡಿಸಲಾಗುವುದು ಎಂದರು.

ದಿ.ಸುರೇಶ ಅಂಗಡಿ ರೈಲ್ವೆ ರಾಜ್ಯ ಸಚಿವರಾಗಿದ್ದ ಅವಧಿಯಲ್ಲಿ ಧಾರವಾಡ-ಕಿತ್ತೂರು- ಬೆಳಗಾವಿ ನೂತನ ರೈಲ್ವೆ ಯೋಜನೆಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದರು. ಅದುೀ ಅಂತಿಮಗೊಂಡಿತ್ತು. ಇದೀಗ ಆ ಯೋಜನೆಯನ್ನು ಮುಂದುವರಿಸಲಾಗುತ್ತಿದೆ. ಮತ್ತೆ ಮರು ಸಮೀಕ್ಷೆ ನಡೆಸಿದರೆ ಹೆಚ್ಚುವರಿಯಾಗಿ 250 ಕೋಟಿ ರೂ. ವರೆಗೆ ಅನುದಾನ ಬೇಕಾಗುತ್ತದೆ. ಹಾಗಾಗಿ ಹಳೆ ಯೋಜನೆಯನ್ನೇ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿನ ಅತ್ಯುತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಕೃಷಿ, ಉತ್ಪಾದಕ, ಕೈಗಾರಿಕೆ, ರಸ್ತೆ, ಕುಡಿಯುವ ನೀರು, ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಕಳೆದ ಸಾಲಿನ ಬಜೆಟ್‌ಗೆ ಹೋಲಿಕೆ ಮಾಡಿದರೆ ಈ ಬಾರಿ ಕರ್ನಾಟಕ್ಕೆ ಶೇ.50ರಷ್ಟು ಹೆಚ್ಚು ಅನುದಾನ ನೀಡಿದ್ದಾರೆ. ದಿ.ಸುರೇಶ ಅಂಗಡಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಕೈಗೊಂಡಿರುವ ನೂತನ ರೈಲ್ವೆ ಯೋಜನೆಗಳನ್ನು ಸರ್ಕಾರ ಮುಂದುವರಿಸಿದೆ ಎಂದರು.

ಬೆಳಗಾವಿ ನಗರದ ರೈಲ್ವೆ ನಿಲ್ದಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ನಿಗದಿತ ಸಮಯದಲ್ಲಿಯೇ ಪೂರ್ಣಗೊಳ್ಳುವ ವಿಶ್ವಾಸ ಇದೆ. ಬೆಳಗಾವಿ ನಗರದ 1 ಮತ್ತು 2 ರೈಲ್ವೆ ಗೇಟ್ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿವೆ ಎಂದು ಹೇಳಿದರು. ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ರಾಜ್ಯಸಭಾ ಸದಸ್ಯ, ಪಕ್ಷದ ಪದಾಧಿಕಾರಿಗಳು ಇದ್ದರು.