ವಿಜಯವಾಣಿ ಸುದ್ದಿಜಾಲ ಧಾರವಾಡ
ರಂಗಾಯಣ, ಜಿಲ್ಲಾಡಳಿತ ಹಾಗೂ ಧ್ವನಿ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿನ ಕರ್ನಾಟಕ ಕಾಲೇಜು ಆವರಣದಲ್ಲಿ ಡಿ. 25, 25ರಂದು ಸ್ವಾತಂತ್ರೃ ಸಂಗ್ರಾಮದ ಬೆಳ್ಳಿಚುಕ್ಕಿ ‘ವೀರರಾಣಿ ಕಿತ್ತೂರು ಚೆನ್ನಮ್ಮ’ ಮೆಗಾ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 24ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡುವರು. ತೋಂಟದ ಡಾ. ಸಿದ್ಧರಾಮ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಸಚಿವರಾದ ವಿ. ಸುನೀಲ ಕುಮಾರ, ಶಂಕರ ಪಾಟೀಲ ಮುನೇನಕೊಪ್ಪ, ಡಾ. ಮುರುಗೇಶ ನಿರಾಣಿ, ಶಾಸಕರಾದ ಜಗದೀಶ ಶೆಟ್ಟರ್, ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಕುಸುಮಾವತಿ ಶಿವಳ್ಳಿ, ಸಿದ್ದು ಸವದಿ, ಪ್ರಸಾದ ಅಬ್ಬಯ್ಯ, ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್, ನಿಗಮ ಮಂಡಳಿ ಅಧ್ಯಕ್ಷರು, ಮೇಯರ್, ಉಪ ಮೇಯರ್, ಇತರರು ಆಗಮಿಸಲಿದ್ದಾರೆ. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕನ್ನಡ ರಂಗಭೂಮಿಯಲ್ಲಿ ಪ್ರಥಮ ಬಾರಿಗೆ ಕಿತ್ತೂರು ಚೆನ್ನಮ್ಮ ಮೆಗಾ ನಾಟಕ ಪ್ರದರ್ಶನವನ್ನು ಧಾರವಾಡ ರಂಗಾಯಣ ಆಯೋಜಿಸಲಾಗಿದೆ. ಚೆನ್ನಮ್ಮನ ಕುರಿತ ವಾಸ್ತವ ಸಂಗತಿಗಳನ್ನು ಅನೇಕ ವಿದ್ವಾಂಸರು, ಸಂಶೋಧಕರು ಮತ್ತು ರಂಗ ತಜ್ಞರು ಪರಿಶೀಲಿಸಿ, ಪ್ರಸ್ತುತ ಪಡಿಸಲಾಗುತ್ತಿದೆ. ಸ್ಥಳೀಯ ಸಂಘ, ಸಂಸ್ಥೆಗಳು, ಇತರರ ಸಹಕಾರ ಪಡೆದಿದ್ದು, ರಾಜ್ಯ ಸರ್ಕಾರ ಸಹ ಅನುದಾನ ನೀಡುವ ಭರವಸೆ ಇದೆ ಎಂದರು.
ಡಿ. 24ರಂದು ವಿದ್ಯಾರ್ಥಿಗಳಿಗೆ ಹಾಗೂ ಡಿ. 25ರಂದು ಎಲ್ಲರಿಗೂ ಸಂಪೂರ್ಣ ಉಚಿತ ಪ್ರವೇಶ ನೀಡಲಾಗುವುದು. ನಾಟಕಕ್ಕೆ ಪ್ರೋತ್ಸಾಹದಾಯಕವಾಗಿ ಆರ್ಥಿಕ ನೆರವಾಗಲು ಟಿಕೆಟ್‌ಗಳನ್ನು ಮಾಡಿದ್ದು, ವಿವಿಧ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ನೀಡಲಾಗಿದೆ. ಸಾರ್ವಜನಿಕರು ನಾಟಕ ಪ್ರದರ್ಶನ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದರು.
ಸಂಶೋಧಕ ಡಾ. ವೀರಣ್ಣ ರಾಜೂರ ಮಾತನಾಡಿ, ಅದ್ಭುತ ರಂಗ ಸಜ್ಜಿಕೆಯಲ್ಲಿ ಅದ್ಧೂರಿ ಪ್ರಯೋಗ ನಡೆಯಲಿದೆ. ಚೆನ್ನಮ್ಮನ ತ್ಯಾಗ, ಬಲಿದಾನ ಮತ್ತು ಸಾಹಸಗಳನ್ನು ಇಂದಿನ ಯುವ ಪಿಳಿಗೆಗೆ ಪ್ರೇರಣೆ ಆಗುವಂತೆ ನಾಟಕವನ್ನು ಹೆಣೆಯಲಾಗಿದೆ. ಉಹಾಪೋಹಗಳ ಹೊರತಾಗಿ ಸಂಶೋಧಕರು, ವಿದ್ವಾಂಸರು ಶಿಫಾರಸ್ಸು ಮಾಡಿದ ವಾಸ್ತವ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಅರುಣ ಜೋಶಿ, ವಿಶ್ವನಾಥ ಮಂಡಿ, ಕಲ್ಲಪ್ಪ ಮಿರ್ಜಿ, ಮಹೇಶ ಆಚಾರಿ, ವಿನಯ ಚವ್ಹಾಣ, ಭೀಮನಗೌಡ ಪಾಟೀಲ, ಕಲ್ಲಪ್ಪ ಪೂಜಾರ, ಮಲ್ಲಿಕಾರ್ಜುನ ಚಿಕ್ಕಮಠ, ಡಾ.ಬಾಳಣ್ಣ ಶೀಗಿಹಳ್ಳಿ, ಇತರರು ಇದ್ದರು.