ಜಿಲ್ಲೆ

ಕಿಡಿಗೇಡಿಗಳಿಂದ ಕರೀಘಟ್ಟ ಬೆಟ್ಟಕ್ಕೆ ಬೆಂಕಿ

ಶ್ರೀರಂಗಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಹಾಗೂ ಪ್ರಕೃತಿ ತಾಣ ಕರೀಘಟ್ಟ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ನೂರಾರು ಎಕರೆಯಷ್ಟು ಅರಣ್ಯ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟುಹೋಗಿದೆ.


ತಾಲೂಕಿನ ಟಿ.ಎಂ.ಹೊಸೂರು ವಲಯದ ಅರಣ್ಯದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಕಾಣಿಸಿಕೊಂಡ ಬೆಂಕಿಯ ಜ್ವಾಲೆ ಬೀಸುತ್ತಿದ್ದ ಗಾಳಿಯಿಂದ ಎಲ್ಲೆಡೆ ವ್ಯಾಪಿಸಿ ಕರೀಘಟ್ಟದ ಸುಮಾರು 565 ಎಕರೆ ಅರಣ್ಯ ಪ್ರದೇಶಕ್ಕೆ ವ್ಯಾಪಿಸಿ ಹೊತ್ತಿ ಉರಿಯಿತು.


ಬೇಸಿಗೆ ಸಮೀಪಿಸಿದ ಹಿನ್ನೆಲೆಯಲ್ಲಿ ಕರೀಘಟ್ಟ ಬೆಟ್ಟದಲ್ಲಿ ಆಳೆತ್ತರ ಬೆಳೆದಿದ್ದ ಹುಲ್ಲುಗಳು ಭಾಗಶಃ ಒಣಗಿದ್ದು, ಇದರಿಂದ ಬಹುಬೇಗ ಬೆಂಕಿಯ ಜ್ವಾಲೆ ವ್ಯಾಪಿಸಿ ಬೆಲೆ ಬಾಳುವ ಹಾಗೂ ಔಷಧದ ಗಿಡಮರಗಳು ಬೆಂದುಹೋದವು. ಕರೀಘಟ್ಟ ಬೆಟ್ಟದಲ್ಲಿ ಕಂಡುಬರುವ ಅಪರೂಪದ ಪಕ್ಷಿಗಳು ಹಾಗೂ ಹಾವು, ಮೊಲ ಸೇರಿದಂತೆ ಇತರ ಜೀವಿಗಳು ಬೆಂಕಿಯಿಂದ ಸುಟ್ಟು ಕರಕಲಾದವು.


ಕರೀಘಟ್ಟವು ಅತ್ಯಂತ ಕಡಿದಾದ ಬೆಟ್ಟವಾದ ಕಾರಣ ಬೆಂಕಿ ನಂದಿಸಲು ಅಗ್ನಿಶಾಮಕ ವಾಹನ ಆಗಮಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ 10 ಜನ ರಕ್ಷಕರು ಹಾಗೂ ಶ್ರೀನಿವಾಸ ಅಗ್ರಹಾರ ಗ್ರಾಮದ ಹಸಿರು ಸೈನ್ಯದ 12ಕ್ಕೂ ಹೆಚ್ಚು ಯುವಕರು ಪರಿಸರ ರಮೇಶ್ ನೇತೃತ್ವದಲ್ಲಿ ಫೈಯರ್‌ಲೈನ್ ಸೃಷ್ಟಿಸಿ ಗಿಡಗಳ ಸೊಪ್ಪಿನಿಂದ ಅಲ್ಲ್ಲಿ ಬಡಿದು ಹಾಗೂ ಕೆಳಗಿರುವ ಸಿಡಿಎಸ್ ನಾಲೆಯಿಂದ ನೀರು ಹೊತ್ತು ತಂದು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಕರೀಘಟ್ಟದ ಟ್ರೀ ಪಾರ್ಕ್, ಅಪ್ಪು ಉದ್ಯಾನವನ ಹಾಗೂ ಕೆಲವು ವರ್ಷಗಳಿಂದಚೀಗೆ ನೆಟ್ಟು ನೀರುಣಿಸಿ ಕಾಪಾಡಿಕೊಂಡು ಬಂದಿರುವ ಅಪರೂಪದ ಗಿಡಗಳನ್ನು ರಕ್ಷಿಸುವಲ್ಲಿ ಸಂಜೆಯ ಹೊತ್ತಿಗೆ ಯಶಸ್ವಿಯಾದರು.


ಕಳೆದ ಹಲವು ದಿನಗಳಿಂದ ಕರೀಘಟ್ಟ ಬೆಟ್ಟಕ್ಕೆ ಬೆಂಕಿ ಹಚ್ಚದಂತೆ ಸ್ಥಳೀಯ ಗ್ರಾಮಗಳ ಜನರಲ್ಲಿ ಅರಣ್ಯ ಇಲಾಖೆ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಿತ್ತು. ಶ್ರೀನಿವಾಸ ಅಗ್ರಹಾರ ಗ್ರಾಮದ ಹಸಿರು ಸೇನೆ ಮಕ್ಕಳು ವಿವಿಧ ಗ್ರಾಮಗಳ ಮನೆ ಮನೆಗೆ ತೆರಳಿ ಗ್ರಾಮಸ್ಥರಲ್ಲಿ ಮನವಿ ಮಾಡಿತ್ತು. ಇಷ್ಟಾದರೂ ಸಹ ಕರೀಘಟ್ಟದ ಶ್ರೀನಿವಾಸ ವೆಂಕಟರಮಣಸ್ವಾಮಿಯ ಜಾತ್ರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೊನೆಗೂ ಯಾರೋ ಕಿಡಿಗೇಡಿಗಳು ಹರಕೆ ಸಲ್ಲಿಸುವ ರೂಪದಲ್ಲಿ ಬೆಂಕಿ ಹಚ್ಚಿರುವ ಕೃತ್ಯಕ್ಕೆ ಸ್ಥಳಿಯರು ಹಾಗೂ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.