ಗುಂಡ್ಲುಪೇಟೆ: ತಾಲೂಕಿನ ಕಲ್ಲಿಗೌಡನಹಳ್ಳಿ ಗ್ರಾಮದ ಜಮೀನಿನ ಕೃಷಿ ಹೊಂಡಕ್ಕೆ ಕಿಡಿಗೇಡಿಗಳು ಕಳೆನಾಶಕ ಔಷಧ ಸುರಿದಿದ್ದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಬೆಳ್ಳುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ.
ಗ್ರಾಮದ ರೈತ ಸಂತೋಷ್ 1.5 ಎಕರೆ ಜಮೀನಿನಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಬೆಳ್ಳುಳ್ಳಿ ಬೆಳೆ ಬೆಳೆದಿದ್ದರು. ಉತ್ತಮವಾಗಿ ಬೆಳೆದಿದ್ದ ಫಸಲಿನಿಂದ ಹೆಚ್ಚಿನ ಇಳುವರಿ ಹಾಗೂ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಜಮೀನಿನಲ್ಲಿ ನಿರ್ಮಿಸಿದ್ದ ಕೃಷಿಹೊಂಡಕ್ಕೆ ಕಿಡಿಗೇಡಿಗಳು ಕಳೆನಾಶಕ ಔಷಧ ಸುರಿದಿದ್ದು, ಇದರ ಬಗ್ಗೆ ಅರಿವಿಲ್ಲದ ಸಂತೋಷ್ ಮೂರು ದಿನಗಳ ಹಿಂದೆ ಕೃಷಿ ಹೊಂಡದಲ್ಲಿದ್ದ ನೀರನ್ನು ಬೆಳ್ಳುಳ್ಳಿ ಬೆಳೆಗೆ ಹಾಯಿಸಿದ್ದರು. ಇದರಿಂದ ಬೆಳ್ಳುಳ್ಳಿ ಬೆಳೆ ಸಂಪೂರ್ಣ ಒಣಗಿ ಹೋಗಿದೆ. ಜತೆಗೆ ಕೃಷಿ ಹೊಂಡದಲ್ಲಿ ಸಾಕಣೆ ಮಾಡಿದ್ದ ಮೀನುಗಳು ಕೂಡ ಸಾವಿಗೀಡಾಗಿವೆ.
ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ಖಂಡನೆ ವ್ಯಕ್ತವಾಗುತ್ತಿದೆ.
ಘಟನೆಯಿಂದ ನನಗೆ ತುಂಬಾ ಆಘಾತ ಉಂಟಾಗಿದೆ. ಮುಂದೆ ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಪೊಲೀಸರಿಗೂ ದೂರು ನೀಡಿಲ್ಲ.
ಸಂತೋಷ್, ಕಲಿಗೌಡನಹಳ್ಳಿ ರೈತರು.