ಪೊನ್ನಂಪೇಟೆ
ಹಿರಿಯ ನಾಗರಿಕರ ಮಾನಸಿಕ ನೆಮ್ಮದಿ ಹಾಗೂ ಸಾಮಾಜಿಕ ಬದುಕಿಗೆ ಅಗತ್ಯವಾದ ನೆರವು ಒದಗಿಸುವ ಉದ್ದೇಶದಿಂದ ಕಿಗ್ಗಟ್‌ನಾಡ್ ಹಿರಿಯ ನಾಗರಿಕರ ವೇದಿಕೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವೇದಿಕೆಯ ಸ್ಥಾಪಕ ಅಧ್ಯಕ್ಷ ಕಾಟೀಮಾಡ ಜಿಮ್ಮಿ ಅಣ್ಣಯ್ಯ ಹೇಳಿದರು.
ಕಿಗ್ಗಟ್‌ನಾಡ್ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಈಚೆಗೆ ನಡೆದ ವೇದಿಕೆಯ ಐದನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಪೊನ್ನಂಪೇಟೆ ಭಾಗದ ಹಿರಿಯ ನಾಗರಿಕರಲ್ಲಿ ಉಂಟಾಗಿದ್ದ ಮಾನಸಿಕ ಒತ್ತಡವನ್ನು ನಿವಾರಿಸಿ, ಅವರ ಮಾನಸಿಕ ಕ್ಷಮತೆ ಹೆಚ್ಚಿಸುವುದರೊಂದಿಗೆ ಅಗತ್ಯ ನೆರವು ನೀಡುವ ಉದ್ದೇಶದಿಂದ ವೇದಿಕೆಯನ್ನು ಸ್ಥಾಪಿಸಲಾಯಿತು. ಸ್ವಾತಂತ್ರ‍್ಯ ಪೂರ್ವದಲ್ಲಿ ಪೊನ್ನಂಪೇಟೆ ಕಿಗ್ಗಟ್‌ನಾಡ್ ತಾಲೂಕಾಗಿದ್ದು, ಈ ಪ್ರದೇಶ ನೂರಾರು ಸ್ವಾತಂತ್ರ‍್ಯ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಹಾಗೂ ವೀರಯೋಧರನ್ನು ದೇಶಕ್ಕೆ ನೀಡಿದೆ. ಆ ಪರಂಪರೆ ಶಾಶ್ವತವಾಗಿ ಉಳಿಯಬೇಕು ಎಂಬ ಆಶಯದಿಂದ ವೇದಿಕೆಗೆ ಕಿಗ್ಗಟ್‌ನಾಡ್ ಹಿರಿಯ ನಾಗರಿಕರ ವೇದಿಕೆ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.
ವೇದಿಕೆಯ ಅಧ್ಯಕ್ಷ ಕೊಟ್ಟುಕತ್ತೀರ ಸೋಮಣ್ಣ ಮಾತನಾಡಿ, ವೇದಿಕೆಯ ಕಚೇರಿಯಲ್ಲಿ ಕೊಡವ ಪುಸ್ತಕ ಪತ್ತಾಯ ಆರಂಭಿಸಲಾಗಿದ್ದು ಸದಸ್ಯರು ಬಿಡುವಿನ ವೇಳೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಪೊನ್ನಂಪೇಟೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಬಸ್ ನಿಲ್ದಾಣಕ್ಕೆ ಈ ಹಿಂದೆ ಜಾಗ ದಾನ ಮಾಡಿದ ದಾನಿಗಳ ಹೆಸರು ಇಡಬೇಕು. ಕೊಡಗು ವಿಶ್ವವಿದ್ಯಾಲಯಕ್ಕೆ ಫೀಲ್ಡ್ ಮಾರ್ಷಲ್ ಕೊಡಂದೇರ ಕಾರ್ಯಪ್ಪ ಅವರ ಹೆಸರಿಡಬೇಕೆಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಕಾಳಿಮಾಡ ಶಿವಪ್ಪ, ಮಡಿಕೇರಿ ಎಫ್‌ಎಂಸಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ತೇಲಪಂಡ ಮಾದಪ್ಪ ಹಾಗೂ ಚೆಕ್ಕೇರ ಸನ್ನಿ ಮೊಣ್ಣಪ್ಪ ಮಾತನಾಡಿದರು.
ವೇದಿಕೆಯ ವತಿಯಿಂದ ಪ್ರತಿವರ್ಷ ಓರ್ವ ಸಾಧಕರನ್ನು ಗೌರವಿಸುವ ಪರಂಪರೆಯAತೆ ರಾಜ್ಯ ಪ್ರಶಸ್ತಿ ವಿಜೇತೆ ಹಾಗೂ ಹಿರಿಯ ಸಮಾಜ ಸೇವಕಿ ಕೈಬಿಲಿರ ಪಾರ್ವತಿ ಬೋಪಯ್ಯ ಅವರಿಗೆ ವರ್ಷದ ಶ್ರೇಷ್ಠ ಮಹಿಳಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪಾರ್ವತಿ ಬೋಪಯ್ಯ, ಹಿರಿಯ ನಾಗರಿಕರ ವೇದಿಕೆ ಹಲವು ಜನಪರ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದ್ದು, ಇದೇ ರೀತಿಯ ಸೇವಾ ಕಾರ್ಯಗಳು ಮುಂದುವರಿಯಲಿ ಎಂದು ಹಾರೈಸಿದರು.
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವೇದಿಕೆಯ ಸದಸ್ಯರ ಮೊಮ್ಮಕ್ಕಳಾದ ದೇಯಂಡ ಪಿ. ಬೋಜಮ್ಮ, ಕಾಟೀಮಾಡ ಡಿ. ಭಾಷಿತ ಹಾಗೂ ಅಚ್ಚಿಯಂಡ ಜಿ. ದೃತಿ ಅವರಿಗೆ ವೇದಿಕೆಯ ವಿದ್ಯಾನಿಧಿಯಿಂದ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
90 ವರ್ಷ ಮೇಲ್ಪಟ್ಟ ವೇದಿಕೆಯ ಹಿರಿಯ ಸದಸ್ಯರಾದ ನಿವೃತ್ತ ಶಿಕ್ಷಕ ಪಾರುವಂಗಡ ಮೊಣ್ಣಪ್ಪ, ನಿವೃತ್ತ ಸೈನಿಕ ಮಂಡAಗಡ ಪೂವಯ್ಯ ಹಾಗೂ ನಿವೃತ್ತ ಪೊಲೀಸ್ ಉಪನಿರೀಕ್ಷಕ ತೀತಮಾದ ಮಂದಣ್ಣ ಅವರನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ಚೇಂದಿರ ಬೋಪಣ್ಣ, ಉಪಾಧ್ಯಕ್ಷ ಮಂಡೇಚAಡ ಗಣೇಶ್, ಖಜಾಂಚಿ ಐನಂಡ ಕೆ. ಮಂದಣ್ಣ, ಜಂಟಿ ಕಾರ್ಯದರ್ಶಿ ನೆರೆಯಂಡಮ್ಮನ ಸುಬ್ರಮಣಿ ಮತ್ತಿತರರು ಇದ್ದರು.