ಜಿಲ್ಲೆ

ಕಿಕ್ಕೇರಿಯಲ್ಲಿ ಗಂಗೆ ಗೌರಿ ಹಬ್ಬದ ಸಂಭ್ರಮ

ಕಿಕ್ಕೇರಿ: ಹೋಬಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಜನತೆ ಗಂಗೆ ಗೌರಿ ಅಮ್ಮನವರ ಹಬ್ಬ ವನ್ನು ಸಂಭ್ರಮದಿಂದ ಆಚರಿಸಿದರು.


ತಲೆಮಾರಿನ ಸಾಂಪ್ರದಾಯಿಕ ಪೂಜೆಯಂತೆ ಈ ಬಾರಿ ಬಸೆಟ್ಟಿ ಅಯ್ಯನವರ ನಾಗೇಂದ್ರ ಅವರು ಅಮಾನಿಕೆರೆಯಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಮುಳುಗಿ ಮರಳು ಗೌರಮ್ಮನನ್ನು ಶ್ರದ್ಧೆಯಿಂದ ತಂದು ಮನೆಯಲ್ಲಿ ಪ್ರತಿಷ್ಠಾಪಿಸಿದರು. ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ಗ್ರಾಮದ ಮಹಿಳೆಯರಿಗೆ ಪೂಜೆಗೆ ಅನುವು ಮಾಡಿಕೊಟ್ಟರು. ಮಹಿಳೆಯರು ತಂಡೋಪತಂಡವಾಗಿ ನಾಗೇಂದ್ರ ಅವರ ಮನೆಗೆ ಆಗಮಿಸಿ ಮರಳು ಗೌರಮ್ಮನಿಗೆ ವಿವಿಧ ಫಲ ತಾಂಬೂಲ, ಬಾಗಿನ ಅರ್ಪಿಸಿ ಇಷ್ಟಾರ್ಥಕ್ಕೆ ಪ್ರಾರ್ಥಿಸಿದರು.


ಗಂಗಾಮತಸ್ಥ ಸಮುದಾಯದವರು ಪ್ರತ್ಯೇಕವಾಗಿ ಇದೇ ರೀತಿ ಅಮಾನಿಕೆರೆಯಲ್ಲಿ 3 ಬಾರಿ ಮುಳುಗಿ ಕೈಗೆ ಸಿಕ್ಕ ವಸ್ತುವನ್ನು ಗಂಗೆ ಗೌರಿ ಜೋಡಿ ತೊಟ್ಟಿಲುಗಳಲ್ಲಿ ಇಟ್ಟು ಅಗ್ರ ಪೂಜೆ ಸಲ್ಲಿಸಿ ದೇವಿಯ ಮೆರವಣಿಗೆಯನ್ನು ಮಂಗಳವಾದ್ಯದೊಂದಿಗೆ ಮಾಡಿದರು.


ಬಸವಣ್ಣನ ಗುಡಿ, ರಥಬೀದಿ, ಹೊಸಬೀದಿ, ಬ್ರಹ್ಮೇಶ್ವರ ದೇಗುಲ, ನರಸಿಂಹಸ್ವಾಮಿ ಬೀದಿಯಲ್ಲಿ ಮೆರವಣಿಗೆ ಸಾಗಿತು. ಪ್ರತಿ ಮನೆಗಳ ಮುಂದೆ ಮಹಿಳೆಯರು ರಂಗೋಲಿಗಳಿಂದ ಶೃಂಗರಿಸಿ ತೊಟ್ಟಿಲು ಗಂಗೆಗೌರಿಯನ್ನು ಪೂಜಿಸಿ ಬಾಗಿನ ಅರ್ಪಿಸುವ ಮೂಲಕ ಉಡಿ ತುಂಬಿದರು.


ಮಹಿಳೆಯರು ಮನೆ ಮನೆಗೆ ತೆರಳಿ ಹಬ್ಬದ ಸವಿಯನ್ನು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಾಗಿನ ಅರ್ಪಿಸಿ ಹಬ್ಬದ ಸಂಭ್ರಮ ಸವಿದರು. ಹಲವರು ಸುಮಂಗಲಿ ಪೂಜೆಯನ್ನು ನೆರವೇರಿಸಿದರು.


ಗ್ರಾಪಂ ಮಾಜಿ ಅಧ್ಯಕ್ಷ ಕೆ.ವಿ. ಅರುಣ್‌ಕುಮಾರ್, ಮಾಜಿ ಸದಸ್ಯ ಕಾಯಿ ಮಂಜೇಗೌಡ, ಮುಖಂಡ ಪುಟ್ಟೇಗೌಡ, ಗಂಗಾಮತಸ್ಥ ಮುಖಂಡರು ಹಾಜರಿದ್ದರು.