ಜಿಲ್ಲೆ

ಕಿಂಡಿ ಅಣೆಕಟ್ಟುಗಳಿಗೆ ಗ್ರಾಮಸ್ಥರ ವಿರೋಧ

ಸುಂಟಿಕೊಪ್ಪ: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಜಾಗದ ರಕ್ಷಣೆಗಾಗಿ ಸಣ್ಣ ನೀರಾವರಿ ಮತ್ತು ಅಂತರ ಜಲಾಭಿವೃದ್ಧಿಯ 2 ಕಿಂಡಿ ಅಣೆಕಟ್ಟುಗಳ ಕಾಮಗಾರಿ ಗ್ರಾಮಸ್ಥರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸ್ಥಗಿತಗೊಳ್ಳುವ ಭರವಸೆ ದೊರಕಿದೆ.\


ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ.ಬ್ಲಾಕ್ ಮೊದ್ದೂರು ಗ್ರಾಮದ ಇಬ್ನಿವಾಳವಾಡಿ ಹಳ್ಳದ ಮೇಲ್ಭಾಗದಲ್ಲಿ ನಡೆಯುತ್ತಿರುವ 2 ಕಿಂಡಿ ಅಣೆಕಟ್ಟುಗಳ ಕಾಮಗಾರಿ ಇದೀಗ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದ್ದು, ಅಣೆಕಟ್ಟೆ ನಿರ್ಮಾಣಗೊಂಡಲ್ಲಿ ಹೊಳೆ ಕೆಳಗಿನ ರೈತರಿಗೆ ತೀವ್ರ ಸಮಸ್ಯೆ ಉಂಟಾಗಲಿ ಎಂದು ಮೊದ್ದೂರು, ಅತ್ತೂರು, ನಲ್ಲೂರು, ಕಂಬಿಬಾಣೆ ಹಾಗೂ ಚಿಕ್ಲಿಹೊಳೆ ವ್ಯಾಪ್ತಿಯ ಜನರು ಆರೋಪಿಸಿದ್ದಾರೆ. ವಿಶೇಷವಾಗಿ ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ನೀರಿನ ಸಮಸ್ಯೆ ಉಂಟಾಗಲಿದ್ದು, ಇದು ಪಶು-ಪಕ್ಷಿ, ಪ್ರಾಣಿಗಳ ಮೇಲೂ ಕೂಡ ಪ್ರಭಾವ ಬೀರಲಿದೆ ಎಂದು ಕೆದಕಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂಜು ಪೊನ್ನಪ್ಪ ಆತಂಕ ವ್ಯಕ್ತಪಡಿಸಿದರು.


ವಿಶೇಷವೆಂದರೇ ಚಿಕ್ಕಿಹೊಳೆ ನದಿಯ ಹುಟ್ಟು ಮತ್ತು ಹರಿವು ಈ ವ್ಯಾಪ್ತಿಯಲ್ಲಿ ಪ್ರಾರಂಭವಾಗುತ್ತಿದ್ದು, ಒಂದು ವೇಳೆ ಏಕವ್ಯಕ್ತಿಯ ಅನೂಕೂಲಕ್ಕಾಗಿ ಕಿಂಡಿ ಅಣೆಕಟ್ಟು ನಿರ್ಮಾಣವಾದರೆ ಸಹಸ್ರಾರು ಜನರು ಮತ್ತು ಚಿಕ್ಕಿಹೊಳೆ ಅರಣ್ಯ ಅಂಚಿನಲ್ಲಿರುವ ಮೀನುಕೊಲ್ಲಿ ಅರಣ್ಯದ ವನ್ಯ ಪ್ರಾಣಿಗಳಿಗೆ ಮರಣಶಾಸನವಾಗಿ ಪರಿಣಮಿಸಲಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಮಡಿಕೇರಿಯ ಸಣ್ಣ ನೀರಾವರಿ ಮತ್ತು ಅಂತರ ಜಲಾಭಿವೃದ್ಧಿಯ ಇಲಾಖೆಯವರಿಗೆ ಲಿಖಿತ ಮನವಿ ನೀಡಿದ್ದು, ಕಾಮಗಾರಿ ಸ್ಥಗಿತಗೊಳಿಸುವುದಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಭರವಸೆ ನೀಡಿದ್ದಾರೆ.


ಕಾಮಗಾರಿ ಮತ್ತು ಅದರ ಅಡ್ಡ ಪರಿಣಾಮಗಳ ಬಗ್ಗೆ ಪಂಚಾಯಿತಿ ಸದಸ್ಯರು ತಿಳಿದುಕೊಂಡು ಸ್ಥಳ ಪರಿಶೀಲಿಸಿ, ಕಾಮಗಾರಿ ಸ್ಥಗಿತಗೊಳಿಸಲು ತೀರ್ಮಾನಿಸಿದ್ದು, ಆ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಿದ್ದಾರೆ.
ಅಚ್ಚರಿಯ ವಿಷಯವೆಂದರೆ ಏಕವ್ಯಕ್ತಿಯ ಜಾಗಕ್ಕೆ ತೆರಳಲು ಸರ್ವ ಋತು ರಸ್ತೆ ನಿರ್ಮಾಣ, ಕೋಟ್ಯಂತರ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಸಾಧ್ಯವಾಗಿದ್ದು ಹೇಗೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಗ್ರಾಮ ಪಂಚಾಯಿತಿ ಮೂಗಿನ ಅಡಿಯಲ್ಲೇ ಇಷ್ಟೇಲ್ಲ ಕಾಮಗಾರಿ ನಡೆದರೂ ತಿಳಿದಿಲ್ಲ ಎಂಬುದು ಚರ್ಚೆಯ ವಿಚಾರವಾಗಿದೆ.


ಕಾಮಗಾರಿಯ ಬಗ್ಗೆ ಗ್ರಾಮಸ್ಥರು ಮತ್ತು ಕೆದಕಲ್ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಅಸಾಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇದೀಗ ಮಂಗಳವಾರದ ಬೆಳವಣಿಗೆಯಾಗಿ ಮಡಿಕೇರಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನೀಯರ್ ಅವರು ಸದರಿ ಕಾಮಗಾರಿಯನ್ನು ನಿಲ್ಲಿಸುವುದಲ್ಲದೆ, ಯಾಥಾಸ್ಥಿತಿ ಕಾಪಾಡುವುದಾಗಿ ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.


ಈ ರೀತಿಯ ರಾತ್ರೋರಾತ್ರಿ ರಸ್ತೆ ನಿರ್ಮಾಣ, ಕಿಂಡಿ ಅಣೆಕಟ್ಟು ನಿರ್ಮಾಣ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದ್ದರೂ ಕೂಡ ಕಾಣದ ಕೈಗಳ ಕೈವಾಡ ಮತ್ತು ಹಣ ಪ್ರಭಾವದಿಂದಾಗಿ ಸ್ಥಳೀಯ ಆಡಳಿತ ಜಾಣ ಕುರುಡು, ಕಿವುಡು ಹಿನ್ನೆಲೆಯಲ್ಲಿ ಈ ರೀತಿಯ ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ.
ಅಧಿಕಾರರೂಢ ಪ್ರಭಾವಿ ವ್ಯಕ್ತಿಯೊಬ್ಬರ ಕೃಪಾಕಟಾಕ್ಷದಿಂದ ಕೋಟ್ಯಂತರ ರೂ. ಕಾಮಗಾರಿಗೆ ಭೂಮಿಪೂಜೆಯೂ ನೆರವೇರಿಸದೆ ಅಧಿಕಾರಿಗಳು ಕ್ಷೀಪ್ರಗತಿಯ ಕಾಮಗಾರಿಗೆ ಗೌಪ್ಯವಾಗಿ ಚಾಲನೆ ನೀಡಿದ್ದಾರೆ ಎಂಬ ಮಾತು ಜನವಲಯದಲ್ಲಿ ಕೇಳಿ ಬರುತ್ತಿದೆ.

ಈ ರೀತಿಯ ಪ್ರಕರಣವು ಜಿಲ್ಲೆಯ ಜನತೆಯ ಕಣ್ಣು ತೆರೆಸಬೇಕಾಗಿದ್ದು, ಪ್ರಜ್ಞಾವಂತ ನಾಗರಿಕರು ಈ ರೀತಿಯ ಜನವಿರೋಧಿ, ಪರಿಸರಕ್ಕೆ ಮಾರಕ ಕಾಮಗಾರಿಗಳನ್ನು ತಡೆಯುವ ನಿಟ್ಟಿನಲ್ಲಿ ಜನಾಂದೋಲನ ರೂಪಿಸಬೇಕಾದ ಅಗತ್ಯತೆ ಇದೆ.