ಮೈಸೂರು: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು ಕನ್ನಡ ಕಾವ್ಯ ಲೋಕದಲ್ಲಿ ಸಮನ್ವಯ ಕವಿ ಎಂದು ಸಾಹಿತಿ, ವರಕೋಡಿನ ಶಿಕ್ಷಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜು ಪಿ.ಚಿಕ್ಕಹಳ್ಳಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾ ಕೂಟ ಸಹಯೋಗದಲ್ಲಿ ರಾಮಕೃಷ್ಣ ನಗರದ ಪರಮಹಂಸ ಯೋಗ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಅಧ್ಯಯನ ಕೇಂದ್ರದಲ್ಲಿ ಮೊದಲ ಬಾರಿಗೆ ಹಸ್ತಪ್ರತಿ ವಿಭಾಗ ಸ್ಥಾಪಿಸಿ, ನಾಲ್ಕು ವರ್ಷಗಳಲ್ಲಿ ಅಂದಾಜು 3000 ತಾಳೆಗರಿ ಹಾಗೂ ಸಾವಿರಕ್ಕೂ ಹೆಚ್ಚು ಹಸ್ತಪ್ರತಿಗಳ ಸಂಗ್ರಹ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡಿರುವ ಇವರು ಪ್ರವಾಸ ಕಥನವನ್ನು ಹೆಚ್ಚು ಮೆಚ್ಚುತ್ತಿದ್ದರು. ಇಂದಿಗೂ ಅವರು ಬರೆದಿರುವ ಭಾವಗೀತೆಗಳು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ ಎಂದರು.
ಗಾಯಕ ಮೈಸೂರು ಮಹಾಲಿಂಗು ಅವರು ಜಿಎಸ್‌ಎಸ್ ವಿರಚಿತ ಗೀತೆಗಳನ್ನು ಸೊಗಸಾಗಿ ಹಾಡಿದರು. ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ವಿಪ್ರ ಮುಖಂಡ ಡಾ.ಕೆ.ರಘುರಾಮ್ ವಾಜಪೇಯಿ, ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಆಡಳಿತಾಧಿಕಾರಿ ಕೆ.ಆರ್.ಯೋಗಾನರಸಿಂಹನ್, ಯೋಗಾಚಾರ್ಯ ಶಿವಪ್ರಕಾಶ್ ಗುರೂಜಿ, ಕಸಾಪ ಜಿಲ್ಲಾ ಕಾರ್ಯದರ್ಶಿ ಲತಾ ಮೋಹನ್, ಉಪಾಧ್ಯಕ್ಷ ಎನ್.ಅನಂತ, ಕಾರ್ಯಕ್ರಮದ ಆಯೋಜಕ ಎಂ.ವಿ.ನಾಗೇಂದ್ರ ಬಾಬು ಇದ್ದರು.
\