ಜಿಲ್ಲೆ

ಕಾವೇರಿ ವಿವಾದ: ಕಾನೂನು ತಜ್ಞರ ಸಲಹಾ ಸಮಿತಿ ರಚಿಸಿ

ಮೈಸೂರು: ಕಾವೇರಿ ನದಿ ನೀರು ಹಂಚಿಕೆ ಕುರಿತು ಶಾಶ್ವತ ತಾಂತ್ರಿಕ ಹಾಗೂ ಕಾನೂನು ತಜ್ಞರ ಸಲಹಾ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಬೇಕು ಎಂದು ಸರ್ವೋದಯ ಕರ್ನಾಟಕ ಪಕ್ಷ ಆಗ್ರಹಿಸಿದೆ.


ರಾಜ್ಯಕ್ಕೆ ಕಾವೇರಿ ನೀರು ಹಂಚಿಕೆಯಲ್ಲಿ ಪದೇ ಪದೆ ಅನ್ಯಾಯವಾಗುತ್ತಿದೆ. ಆದಾಗ್ಯೂ ರಾಜ್ಯದ ಸಂಸದರು ಹಾಗೂ ರಾಜ್ಯ ಸರ್ಕಾರ ರೈತರು ಹಾಗೂ ಜನಸಾಮಾನ್ಯರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ಕೇಂದ್ರದ ನೀರಾವರಿ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟವರಿಗೆ ರಾಜ್ಯದ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡುವಂತಹ ಯಾವುದೇ ಗಂಭೀರವಾದ ಪ್ರಯತ್ನವನ್ನೂ ಸಹ ಕೈಗೊಂಡಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.


ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರವನ್ನು ಪಾಲನೆ ಮಾಡಿಲ್ಲ. ಇದು ರೈತರನ್ನು ಕಷ್ಟಕ್ಕೆ ಸಿಲುಕಿಸಿದೆ. ಈ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ನಿರ್ಲಕ್ಷೃ ಧೋರಣೆ ಮುಂದುವರಿಸಿದರೆ ರಾಜ್ಯದ ಶಾಸಕರು ಹಾಗೂ ಸಂಸದರ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.


ಕಾವೇರಿ ನ್ಯಾಯಾಧೀಕರಣ ಅಂತಿಮ ತೀರ್ಪಿನ ಕಲಂ 7ರಲ್ಲಿ ಕಾವೇರಿ ಜಲಾನಯನ ಪ್ರದೇಶಗಳ ರಾಜ್ಯಗಳು ಸಂಕಷ್ಟದ ಸಮಯದಲ್ಲಿ ನೀರು ಹಂಚಿಕೆ ಪ್ರಮಾಣವನ್ನು ಮಳೆಯಾಧಾರಿತವಾಗಿ ಬಗೆಹರಿಸಿಕೊಳ್ಳುವಂತೆ ಸ್ಪಷ್ಟವಾಗಿ ತಿಳಿಸಲಾಗಿದೆ. ಆದಾಗ್ಯೂ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಬದಲಾಗಿ ರಾಜಕೀಯ ಹಿತಾಸಕ್ತಿಗಾಗಿ ರಾಜ್ಯದ ರೈತರು ಹಾಗೂ ಜನತೆಯನ್ನು ಬಲಿ ಪಶು ಮಾಡಲಾಗಿದೆ ಎಂದು ಕಿಡಿಕಾರಿದರು.


ರಾಜ್ಯದಲ್ಲಿ ಪ್ರಸಕ್ತ ವರ್ಷ 130ಕ್ಕೂ ಹೆಚ್ಚಿನ ತಾಲೂಕುಗಳಲ್ಲಿ ಬರಗಾಲವಿದೆ ಎಂದು ಹಲವಾರು ಇಲಾಖೆಯ ಅಂಕಿ ಅಂಶಗಳು ಹೇಳುತ್ತಿವೆ. ಆದರೆ ರಾಜ್ಯ ಸರ್ಕಾರ ಬರಗಾಲ ಘೋಷಿಸಿ ಬರ ನಿರ್ವಹಣೆ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಎನ್‌ಡಿಆರ್‌ಎಫ್ ಪರಿಹಾರದೊಂದಿಗೆ ಸರ್ಕಾರವೂ ರೈತರ ನೆರವಿಗೆ ತುರ್ತಾಗಿ ಧಾವಿಸಬೇಕೆಂದು ಆಗ್ರಹಿಸಿದರು.


ರಾಜ್ಯ ಸರ್ಕಾರ ಕಾವೇರಿ ನೀರು ಸಲಹಾ ಸಮಿತಿ ಮುಂದೆ ಕಾವೇರಿ ಕೊಳ್ಳದ ರೈತರ ಬೆಳೆಗಳಿಗೆ ಕಟ್ಟು ಪದ್ಧತಿ ಪ್ರಕಾರ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ಸೂಚನಾ ಪತ್ರ ಹೊರಡಿಸಿರುತ್ತದೆ. ಈ ಸೂಚನೆಯಂತೆ ರೈತರು ಬೆಳೆ ಬೆಳೆದಿದ್ದು, ನೀರಿನ ಕೊರತೆ ಎದುರಾಗಿದೆ. ಸರ್ಕಾರದ ತನ್ನ ಸೂಚನೆಗೆ ಬದ್ಧವಾಗಿ ನೀರು ನೀಡಬೇಕು. ಇಲ್ಲವಾದರೆ ರೈತರಿಗೆ ಪ್ರತಿ ಎಕರೆಗೆ 30 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.


ಪಕ್ಷದ ರಾಜ್ಯ ವಕ್ತಾರ ಎನ್.ಪುನೀತ್, ಮುಖಂಡರಾದ ಸ್ವಾಮಿಗೌಡ, ನಾಗಣ್ಣ, ಅಭಿಜಿತ್ ಇದ್ದರು.