ಜಿಲ್ಲೆ

ಕಾವೇರಿ ವಿಚಾರವಾಗಿ ಸಂಪೂರ್ಣ ಸಹಕಾರ ನೀಡಲು ಸಿದ್ಧ: ಎಚ್.ಡಿ. ದೇವೇಗೌಡ

ಹೊಳೆನರಸೀಪುರ: ಕಾವೇರಿ ವಿಚಾರದಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ನೀರಾವರಿಗೆ ಸಂಬಂಧಪಟ್ಟ ಮಂತ್ರಿಗಳು ಒಂದೊಂದು ಸಾರಿ ಒಂದೊಂದು ಹೇಳಿಕೆಗಳನ್ನು ಕೊಡುತ್ತಾರೆ. ಹೀಗಾದರೆ ಬಹಳ ಕಷ್ಟ. ಮಂತ್ರಿಗಳೇ ಹೀಗೆ ಹೇಳಿದರೆ ಏನು ಹೇಳೋದು ಎಂದು ಜಲಸಂಪನ್ಮೂಲ ಸಚಿವ ಡಿಕೆ  ಶಿವಕುಮಾರ್ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಅಸಮಾಧಾನ ಹೊರಹಾಕಿದರು.

ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದಲ್ಲಿ ಶ್ರಾವಣ ಮಾಸದ ಶನಿವಾರ ಪೂಜೆಯನ್ನು ಕುಟುಂಬಸ್ಥರೊಂದಿಗೆ ನೆರವೇರಿಸಿದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ ಮಂತ್ರಿಗಳು ಯಾವ್ಯಾವ ಸಂದರ್ಭದಲ್ಲಿ ಏನೇನು ಮಾತನಾಡಿದ್ದಾರೆ ಅದರ ದುಷ್ಪರಿಣಾಮ, ಸತ್ಪರಿಣಾಮ ಏನು ಅನ್ನೋದನ್ನು ಯೋಚನೆ ಮಾಡಬೇಕು. ಸಿದ್ದರಾಮಯ್ಯ ಅವರು ನನ್ನ ಹತ್ತಿರ ಇಬ್ಬರು ಅಧಿಕಾರಿಗಳನ್ನು ಕಳಿಸಿದ್ದರು. ನನ್ನ ಆರೋಗ್ಯ ಸರಿಯಿಲ್ಲ. ಆದರೂ ಸಹಕಾರ ಕೊಡುತ್ತೇನೆ. ಈ ರೀತಿ ಹೋಗೋಣ ಎಂದು ಹೇಳಿ ಕಳಿಸಿದೆ ಎಂದರು.

ಬಿಜೆಪಿ, ಕಾಂಗ್ರೆಸ್ ಪಕ್ಷಗಳು ರಾಜ್ಯದ ಹಿತವನ್ನು ಕಾಪಾಡಬೇಕು. ಪ್ರಾದೇಶಿಕ ಪಕ್ಷಗಳು ತಮಿಳುನಾಡಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿವೆ. ಅವರಿಂದ ನಾವು ಕಲಿಯಬೇಕು. ಮಾಧ್ಯಮದವರು ಎಲ್ಲದರಲ್ಲೂ ದೋಷ ಹುಡುಕಲು ಹೋಗ್ತಿರಾ? ನಮ್ಮ ರಾಜ್ಯದ ಹಕ್ಕನ್ನು ಉಳಿಸಲು ನೀವು ಸಹಕಾರ ನೀಡಬೇಕು. ಆಲಮಟ್ಟಿ ನೀರು ಬಳಕೆ ಆಗಿದೆಯಾ? ಮಹದಾಯಿ ವಿಚಾರ ಏನಾಗಿದೆ? ಕಾವೇರಿ ನೀರಿಗಾಗಿ ದೇವೇಗೌಡರ ಹೋರಾಟ ಏನು ಎಂಬುದು ಇಡೀ ನಾಡಿನ ಜನತೆಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.

ಪ್ರಾಧಿಕಾರಕ್ಕೂ ಜವಾಬ್ದಾರಿ ಇದೆ. ಯಾವ ರಾಜ್ಯದಲ್ಲಿ ಎಷ್ಟು ನೀರಿದೆ, ಬೆಳೆ ಇದೆ, ಎಷ್ಟು ನೀರು ಕುಡಿಯಲು ಅವಶ್ಯಕತೆ ಇದೆ ಎಂದು ತಂಡವನ್ನು ಕಳುಹಿಸಿ ಮಾಹಿತಿ ಸಂಗ್ರಹಣೆ ಮಾಡಬೇಕು. ಯಾವುದೇ ಸಂದರ್ಭದಲ್ಲಿ ರಾಜ್ಯದ ಹಕ್ಕನ್ನು ಉಳಿಸಿಕೊಳ್ಳಲು ಬಿಜೆಪಿ, ಕಾಂಗ್ರೆಸ್ ಹಾಗೂ ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂಬುದು ನನ್ನ ಭಾವನೆ. ನೀರಾವರಿ ಮಂತ್ರಿ ನಡವಳಿಕೆ ಬಗ್ಗೆ ಕಮೆಂಟ್ ಮಾಡಲ್ಲ ಎಂದರು.

ಸ್ಟೇಗೆ ಹೋಗುವುದು ಸ್ವಾಭಾವಿಕ

ಪ್ರಜ್ವಲ್ ರೇವಣ್ಣ ಆಯ್ಕೆ ಸಂಸದ ಸ್ಥಾನ ಅಸಿಂಧು ಬಗ್ಗೆ ಪ್ರತಿಕ್ರಿಯಿಸಿದ ಎಚ್ ಡಿ ದೇವೇಗೌಡ, ಮುಚ್ಚು ಮರೆಯಿಂದ ಮಾತನಾಡುವುದು ಏನು ಇಲ್ಲ. ತೀರ್ಪಿನ ಆರ್ಡರ್ ಕಾಪಿ ಇನ್ನೂ ಸಿಕ್ಕಿಲ್ಲ. ಅದರ ಬಗ್ಗೆ ಕಮೆಂಟ್ ಮಾಡಲು ಹೋಗಲ್ಲ. ಸದಸ್ಯತ್ವ ಅಸಿಂಧು ಎಂದು ತೀರ್ಪು ನೀಡಿದ್ದಾರೆ. ಪೂರ್ತಿ ಆದೇಶ ಓದದೇ ಮಾಜಿ ಪ್ರಧಾನಿಯಾಗಿ ಪ್ರತಿಕ್ರಿಯಿಸುವುದು ಸಮಂಜಸವಲ್ಲ. ಸುಪ್ರೀಂಕೋರ್ಟ್‌ಗೆ ಸ್ಟೇಗೆ ಹೋಗುವುದು ಸ್ವಾಭಾವಿಕವಾಗಿ ನಡೆಯುತ್ತದೆ. ಸುಪ್ರೀಂಕೋರ್ಟ್‌ನಲ್ಲಿ ಸ್ಟೇಗೆ ಪ್ರಯತ್ನ ಮಾಡ್ತಾರೆ. ಅಲ್ಲಿ ಏನಾಗುತ್ತದೆ ಅಂತ ನಾನು ಹೇಳಬಾರದು ಎಂದು ಹೇಳಿದರು.

ನಾಳೆ ಎಚ್‌ಡಿಕೆ ಡಿಸ್ಚಾರ್ಜ್:

ನಾನು ಇಲ್ಲಿ ಪೂಜೆಗೆಂದು ಬಂದಿರೋದು, ಕುಮಾರಸ್ವಾಮಿ ಅವರು ನಾಳೆ ಮಧ್ಯಾಹ್ನ ಡಿಸ್ಚಾರ್ಚ್ ಆಗ್ತಾರೆ. ಆದರೆ, ಅವರಿಗೆ ಕನಿಷ್ಠ ನಾಲ್ಕೈದು ದಿನ ವಿಶ್ರಾಂತಿ ಮಾಡು ಎಂದು ಸಲಹೆ ನೀಡಿದ್ದೇನೆ. ಈ ಸಾರಿ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಆಯ್ತು. ವೈರಲ್ ಇನ್ಸ್ಪೆಕ್ಷನ್ ಆಯ್ತು. ನನಗೆ 93 ವರ್ಷ ತುಂಬಿದೆ. ಪಕ್ಷದ ಕೆಲಸಕ್ಕಾಗಿ ಶಕ್ತಿ ಇರುವುಷ್ಟು ಹೋರಾಟ ಮಾಡುತ್ತೇನೆ. ಇವತ್ತು, ನಾಳೆ ಇಲ್ಲೇ ಇರುತ್ತೇನೆ. ನಾಡಿದ್ದು ಬೆಂಗಳೂರಿಗೆ ಹೋಗುತ್ತೇನೆ. ಮತ್ತೆ ಮುಂದಿನ ವಾರ ಬರುತ್ತೇನೆ. ಹಾಸನ ಜಿಲ್ಲೆ ಒಂದೇ ಅಲ್ಲಾ ಬೇರೆ ಬೇರೆ ಕಡೆ ಪ್ರವಾಸ ಮಾಡುತ್ತೇನೆ ಎಂದರು.

ಯಶಸ್ವಿ ಉಡಾವಣೆಗೆ ಅಭಿನಂದನೆ:

ಸೂರ್ಯನ ಅಧ್ಯಯನಕ್ಕೆ ಶನಿವಾರ ಉಡಾವಣೆಯಾದ ಆದಿತ್ಯ ಎಲ್-1 ಯಶಸ್ವಿಯಾಗಿದ್ದು, ಇದಕ್ಕಾಗಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ದೇವೇಗೌಡರು ತಿಳಿಸಿದರು.

ಈಗಾಗಲೇ ಚಂದ್ರಯಾನ-3ರಿಂದ ಬಹಳ ವಿಷಯಗಳು ಹೊರಬಂದಿದೆ. ಇದು ಮಹತ್ತರವಾದ ಸಾಧನೆಯಾಗಿದೆ. ಅದಕ್ಕೆ ದುಡಿದಂತಹ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇಡೀ ಜಗತ್ತಿಗೆ ನಮ್ಮ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಆದ್ದರಿಂದ ಅವರೆಲ್ಲರಿಗೂ ನಾನು ಹೃದಯ ತುಂಬಿ ಅಭಿನಂದಿಸುತ್ತೇನೆ ಎಂದರು.

ತೀರ್ಪಿನ ಕಾಪಿ ನೋಡಿ ಮುಂದಿನ ತೀರ್ಮಾನ: ರೇವಣ್ಣ 

ಪ್ರಜ್ವಲ್‌ರೇವಣ್ಣ ಅವರ ಸಂಸದ ಸ್ಥಾನ ಅನರ್ಹ ತೀರ್ಪಿನ ಪ್ರತಿ ಇನ್ನೂ ಬಂದಿಲ್ಲ, ಪ್ರತಿ ನೋಡಿದ ಮೇಲೆ ಕಾನೂನಾತ್ಮಕವಾಗಿ ಯಾವ ಕ್ರಮ ಕೈಗೊಳ್ಳಬೇಕು ಅದನ್ನು ಮಾಡುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು.

ತೀರ್ಪಿನ ಕಾಪಿಯಲ್ಲಿ ಏನಿದೆ ಎಂಬುದನ್ನು ಮೊದಲು ತಿಳಿದುಕೊಂಡು ಆಮೇಲೆ ಮಾತನಾಡುತ್ತೇನೆ. ಆರ್ಡರ್ ಕಾಫಿ ಬರಲಿ. ನನಗೆ ಯಾವ ಸೂಚನೆಯೂ ಬಂದಿಲ್ಲ. ಕಾನೂನಿಗೆ ನಾವೆಲ್ಲ ತಲೆ ಬಾಗಬೇಕು. ಮುಂದೆ ಏನು ಮಾಡಬೇಕು ಎಂಬುದನ್ನು ವಕೀಲರನ್ನು ಕೇಳಿ ಮಾಡುತ್ತೇವೆ ಎಂದರು.

ಇದೇನು ತಲೆಕೆಡಿಸಿಕೊಳ್ಳಬೇಕಾದ ವಿಷಯವಲ್ಲ: ಸೂರಜ್ ರೇವಣ್ಣ

ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅನರ್ಹತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು, ಇದೇನು ತಲೆಕೆಡಿಸಿಕೊಳ್ಳಬೇಕಾದ ವಿಷಯವಲ್ಲ. ಅವರೇನು ಅಕ್ರಮ, ಭ್ರಷ್ಟಾಚಾರ ಮಾಡಿಲ್ಲ. ಅಫಿಡೆವಿಟ್‌ನಲ್ಲಿ ಒಂದು ಸಣ್ಣ ಪ್ರಾಬ್ಲಂ ಇರುವುದನ್ನು ಸಲ್ಲಿಸಿದ್ದಾರೆ. ಹೈಕೋರ್ಟ್ ತೀರ್ಪು ಕೊಟ್ಟಿದೆ. ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ. ಸುಪ್ರೀಂಕೋರ್ಟ್‌ನಲ್ಲಿ ಸ್ಟೇ ತೆಗೆದುಕೊಳ್ಳಬೇಕು. ಮುಂದಿನ ಕಾನೂನು ಹೋರಾಟವನ್ನು ಸಂಸದರು ಮುಂದುವರೆಸುತ್ತಾರೆ ಎಂದರು.