ಹಾಸನ :ಜಿಲ್ಲೆಯಲ್ಲ್ಲಿ ಕಾವೇರಿ ಹೋರಾಟ ಮುಂದುವರೆದಿದ್ದು, ಕರ್ನಾಟಕದ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಮಹಿಳಾ ಘಟಕದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ರಕ್ತದ ಮೂಲಕ ಪತ್ರಬರೆಯುವ ಮೂಲಕ ಪೋಸ್ಟ್ ಮಾಡುವ ಮೂಲಕ ಅಭಿಯಾನ ನಡೆಸಿದರು.
ನಗರದ ಎಂ.ಜಿ ರಸ್ತೆಯಲ್ಲಿರುವ ಆದಿಚುಂಚನಗಿರಿ ಶಾಲಾ ಆವರಣದಲ್ಲಿ ಕರವೇ ಮಹಿಳಾ ಮುಖಂಡರು ಭಾಗವಹಿಸಿ ರಕ್ತದ ಮೂಲಕ ಕಾವೇರಿ ನಮ್ಮದು ಎಂದು ಬರೆದು ಕಾವೇರಿ ನೀರಿನ ವಿಚಾರವಾಗಿ ಕೇಂದ್ರ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಮಂಜುನಾಥ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇರುವ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನೀರನ್ನು ಕೃಷಿಗೆ ಕೇಳುತ್ತಿದ್ದಾರೆ ಸರ್ಕಾರ ಯಾವುದೇ ಕಾರಣಕ್ಕೂ ನೀರನ್ನು ಬಿಡಬಾರದು ಎಂದು ಹೇಳಿದರು.
ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಿ ಸಂಕಷ್ಟ ಸೂತ್ರ ಜಾರಿಗೊಳಿಸಿ ಕರುನಾಡಿಗೆ ನ್ಯಾಯ ಒದಿಗಿಸಬೇಕು,ರಾಜ್ಯದ ಜನರಿಗೆ ಅನ್ಯಾಯ ಆಗುತ್ತಿದ್ದು, ಕೂಡಲೇ ನೀರನ್ನು ನಿಲ್ಲಿಸಿ ರಾಜ್ಯದ ಜನರ ರಕ್ಷಣೆಗೆ ಮುಂದಾಗಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾದ್ಯಂತ ಕರವೇ ಪದಾಧಿಕಾರಿಗಳು, ಕಾರ್ಯಕರ್ತರು ರಕ್ತದಲ್ಲಿ ಸಾವಿರಾರು ಪತ್ರ ಬರೆದು ಅಭಿಯಾನ ನಡೆಸಿದರು. ರಕ್ತದಲ್ಲಿ ಪತ್ರ ಬರೆದು ನಂತರ ಮುಖ್ಯ ಅಂಚೆ ಕಛೇರಿಯಲ್ಲಿ ಪೋಸ್ಟ್ ಮಾಡುವ ಮೂಲಕ ವಿಭಿನ್ನ ಹೋರಾಟ ಮಾಡಿದರು.
ಈಸಂದರ್ಭದಲ್ಲಿ ಯುವ ಘಟಕದ ಅಧ್ಯಕ್ಷೆ ದೇವಿಕಾ ಮಧು,ಮುಖಂಡರಾದ ಸುಮಿತ್ರಾ ಶೇಖರ್, ಶಶಿಕಲಾ ಅರುಣ್ ಕುಮಾರ್, ಧನಲಕ್ಷ್ಮಿ ಸಂದೇಶ್, ಮಮತಾ ಹೇಮಂತ್ ಸೇರಿದಂತೆ ಇತರರು ಪಾತ್ರಗಳಲ್ಲಿ ಕಾವೇರಿ ನಮ್ಮದು, ನೀರನ್ನು ಉಳಿಸಿ ಕರುನಾಡಿನ ಜನರನ್ನು ರಕ್ಷಿಸಿ ಎಂದು ಬರೆಯುವ ಮೂಲಕ ಕೇಂದ್ರಕ್ಕೆ ಮನವಿ ಮಾಡಿದ್ದಾರೆ