ಜಿಲ್ಲೆ

ಕಾವೇರಿ ಮುಂದೇನು? ಕುರಿತು ದುಂಡುಮೇಜಿನ ಸಭೆ

ಹಾಸನ: ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರೀ ಆದಿಚುಂಚನಗಿರಿ ಮಠದ ಆವರಣದಲ್ಲಿ ಶನಿವಾರ ‘ಕಾವೇರಿ ಮುಂದೇನು?’ ಕುರಿತು ದುಂಡುಮೇಜಿನ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ವಿವಿಧ ಕನ್ನಡಪರ, ಜನಪರ, ಸಮಾನ ಮನಸ್ಕರು ಒಗ್ಗೂಡಿ ಚರ್ಚೆಸಿ 5 ಮಹತ್ವದ ನಿರ್ಣಯಗಳನ್ನು ಕೈಗೊಂಡು ಅದನ್ನು ಕಾರ್ಯರೂಪಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಯಿತು.

ದಿನದಿಂದ ದಿನಕ್ಕೆ ಕಾವೇರಿ ಕಿಚ್ಚು ಹೆಚ್ಚಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ಇಲ್ಲಿನ ಜನರಿಗಾಗಿ ತಮಿಳುನಾಡಿಗೆ ಬಿಡುವ ನೀರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಯಿತು. ಮೊದಲು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರ ಅಭಿಪ್ರಾಯವನ್ನು ಕೇಳಲಾಯಿತು.

ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ ಮಾತನಾಡಿ, ನಮಗೆ ಇಲ್ಲಿ ಒಂದು ಬೆಳೆ ಬೆಳೆಯಲು ನೀರಿಲ್ಲ. ಇನ್ನು ತಮಿಳುನಾಡಿನಲ್ಲಿ ಮೂರು ಬೆಳೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ತಮಿಳುನಾಡಿಗೆ ನೀರು ಬಿಡುವುದು? ಎರಡು ಕಡೆಯೂ ವೈಜ್ಞಾನಿಕವಾಗಿ ಪರಿಶೀಲನೆ ಮಾಡಬೇಕು. ಸತ್ಯಾಂಶ ತಿಳಿದ ಮೇಲೆ ನೀರು ಬಿಡುವುದರ ಬಗ್ಗೆ ತೀರ್ಮಾನಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರ ವೇದಿಕೆಯ ಜಿಲ್ಲಾ ಸಂಚಾಲಕ ಬಿ.ಕೆ. ಮಂಜುನಾಥ್ ಮಾತನಾಡಿ, ಹೇಮಾವತಿಯಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಲಿದೆ. ಹಾಸನ ನಗರಕ್ಕೂ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಲಿದೆ. ಇಂತಹ ಸಂದರ್ಭದಲ್ಲಿ ನಾವು ನೀರು ಬಿಡವುದಾದರೂ ಹೇಗೆ? ಇತ್ತ ಸರ್ಕಾರ ಸರಿಯಾದ ನಿಲುವು ತೆಗೆದುಕೊಳ್ಳುವಲ್ಲಿ ವಿಫಲ ಆಗಿದೆ. ನಾವು ನೀರಿನ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರಿಸಬೇಕು ಎಂದು ತಮ್ಮ ನಿರ್ಧಾರ ಪ್ರಕಟಿಸಿದರು.

ಸಂಕಷ್ಟ ಸಂದರ್ಭದಲ್ಲಿ ಪರಿಹಾರ ರೂಪಿಸಬೇಕು, ಸುಪ್ರೀಂಕೋರ್ಟಿಗೆ ಇಲ್ಲಿನ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು, ಹೋರಾಟಕ್ಕೆ ಸಂಬಂಧಿಸಿದಂತೆ ಸಂಸದರು, ಕನ್ನಡಪರ ಹೋರಾಟಗಾರರು ಎಲ್ಲರೂ ಒಗ್ಗಟ್ಟನ್ನು ಪ್ರದರ್ಶನ ಮಾಡುವುದು, ರಾಜ್ಯದಲ್ಲಿ ತಜ್ಞರ ಸಮಿತಿ ರಚನೆ ಮಾಡಲು ಒತ್ತಡ ಏರುವುದು ಎಂಬ 5 ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಕನ್ನಡಪರ ಹೋರಾಟಗಾರ ಬಾಳ್ಳುಗೋಪಾಲ್, ಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಕಾರ್ಯದರ್ಶಿ ಸೀತರಾಮು, ಎಪಿಎಂಸಿ ಮಾಜಿ ನಿರ್ದೇಶಕ ಗೌಡಗೆರೆ ಪ್ರಕಾಶ್, ಜಿಪಂ ಮಾಜಿ ಉಪಾಧ್ಯಕ್ಷೆ ಜಯಲಕ್ಷ್ಮೀ ರಾಜಣ್ಣ, ಪರಿಸರವಾದಿ ಕಿಶೋರ್, ಬಿ.ಆರ್. ಉದಯಕುಮಾರ್, ವೆಂಕಟೇಶ್, ಲೋಕೇಶ್ ಇನ್ನಿತರರು ಉಪಸ್ಥಿತರಿದ್ದರು.