ಜಿಲ್ಲೆ

ಕಾವೇರಿ ಮಾತೆಗೆ ಗಂಗಾ ಆರತಿ

ಹನೂರು: ತಾಲೂಕಿನ ಗಡಿ ಭಾಗದಲ್ಲಿರುವ ಪಾಲರ್ ಬಳಿಯ ಕಾವೇರಿ ನದಿ ದಡದಲ್ಲಿ ಗುರುವಾರ ಮಹದೇಶ್ವರಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ತಮಿಳುನಾಡಿನ ವಿವಿಧ ಮಠದ ಸ್ವಾಮೀಜಿಗಳ ಸಮ್ಮುಖದಲ್ಲಿ ಕಾವೇರಿ ಮಾತೆಗೆ ಗಂಗಾ ಆರತಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.


ಉತ್ತಮ ಮಳೆ, ಬೆಳೆಯಾಗುವುದರ ಮೂಲಕ ನಾಡು ಸಮೃದ್ಧಿಯಿಂದ ಕೂಡಿರಲಿ. ಮ.ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಸಕಲ ಸೌಭಾಗ್ಯ ಉಂಟು ಮಾಡಲಿ. ಕಷ್ಟ-ಕಾರ್ಪಣ್ಯಗಳನ್ನು ತೊಡೆದು ಹಾಕಿ ಯಾವುದೇ ಸಮಸ್ಯೆ ಉಂಟಾಗದಂತೆ ಕಾವೇರಿ ಮಾತೆ ಎಲ್ಲರನ್ನು ಕಾಪಾಡಲೆಂದು ಪ್ರತಿ ವರ್ಷ ತಮಿಳುನಾಡಿನ ವಿವಿಧ ಮಠದ ಸ್ವಾಮೀಜಿಗಳು ಭಕ್ತರ ಸಮ್ಮುಖದಲ್ಲಿ ಪಾಲಾರ್ ಬಳಿಯ ಕಾವೇರಿ ನದಿಯ ದಡದಲ್ಲಿ ಗಂಗಾ ಆರತಿ ಪೂಜೆಯನ್ನು ನೆರವೇರಿಸಲಾಗುತ್ತದೆ.


ಅದರಂತೆಯೇ ಬೆಳಗ್ಗೆ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಗಣಪತಿ ಪೂಜೆ, ಪುಣ್ಯಗಣ ಹೋಮ, ರುದ್ರಹೋಮ ನೆರವೇರಿಸಿ ಕಳಸ ಆರಾಧನೆಯೊಂದಿಗೆ ಕಾವೇರಿ ಮಾತೆಗೆ ಗಂಗಾ ಆರತಿ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಭಾಗವಹಿಸಿದ್ದ ಹರಗುರು ಚರಮೂರ್ತಿಗಳಿಗೆ ಪಾದಪೂಜೆಯನ್ನು ನೆರವೇರಿಸಲಾಯಿತು. ಈ ಪೂಜಾ ಕಾರ್ಯದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಭಕ್ತರು ಭಾಗಿಯಾಗಿದ್ದರು.