ಜಿಲ್ಲೆ

ಕಾವೇರಿ ನೀರು ನಿರ್ವಹಣಾ ಮಂಡಳಿ ತೀರ್ಪು ವಿರೋಧಿಸಿ ಪ್ರತಿಭಟನೆ

ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ ನೀರು ಹರಿಸಲು ಸೂಚನೆ ನೀಡಿರುವುದನ್ನು ವಿರೋಧಿಸಿ ಕೆ.ಆರ್.ಸಾಗರ ಅಣೆಕಟ್ಟೆ ಮುಖ್ಯದ್ವಾರದ ಮುಂಭಾಗದಲ್ಲಿ ಮಂಗಳವಾರ ಶ್ರೀರಂಗಪಟ್ಟಣದ ಭೂಮಿ ತಾಯಿ ಹೋರಾಟ ಸಮಿತಿ ವತಿಯಿಂದ ಕಣ್ಣಿಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಯಿತು. ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ ಸೇರಿದಂತೆ ಕಾರ್ಯಕರ್ತರು ಇದ್ದರು.

ಕೆ.ಆರ್.ಸಾಗರ: ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ 15 ದಿನ ಗಳ ಕಾಲ 5 ಸಾವಿರ ಕ್ಯುಸೆಕ್ ನೀರು ಹರಿಸಲು ಸೂಚನೆ ನೀಡಿರುವುದನ್ನು ವಿರೋಧಿಸಿ ಕೆ.ಆರ್.ಸಾಗರ ಅಣೆಕಟ್ಟೆ ಮುಖ್ಯದ್ವಾರದ ಮುಂಭಾಗದಲ್ಲಿ ಮಂಗಳವಾರ ಶ್ರೀರಂಗಪಟ್ಟಣದ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಅವರ ನೇತೃತ್ವದಲ್ಲಿ ಕಣ್ಣಿಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.


ರಾಜ್ಯ ಸರ್ಕಾರ ನಿರ್ವಹಣಾ ಮಂಡಳಿಗೆ ಅಣೆಕಟ್ಟೆಯಲ್ಲಿನ ನೀರಿನ ವಾಸ್ತವ ಸ್ಥಿತಿ, ಇಲ್ಲಿನ ರೈತರು ಮತ್ತು ಕುಡಿಯು ನೀರಿನ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರ ವಾಸ್ತವ ಸ್ಥಿತಿ ಮನವರಿಕೆ ಮಾಡುವಲ್ಲಿ ವಿಫಲವಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿ ರಾಜ್ಯ ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ, ಮುಖ್ಯಮಂತ್ರಿ, ಉಪಮುಖಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು ರಾಜ್ಯ ಸರ್ಕಾರ ರಾಜಕೀಯ ಓಲೈಕೆಗಾಗಿ ತಮಿಳುನಾಡಿಗೆ ನೀರು ಬಿಟ್ಟರಲ್ಲ ಎಂದು ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.


ನಂತರ ಕಾವೇರಿ ನೀರು ನಿರ್ವಹಣಾ ಮಂಡಳಿ ನೀರು ಬಿಡಲು ಸೂಚನೆ ನೀಡಿರುವ ಮಾದರಿ ಪ್ರತಿಯನ್ನು ಸುಟ್ಟು ಹಾಕಿದರು.


ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಈಗಿನ ಸರ್ಕಾರ ರೈತರ ಶವದ ಮೇಲೆ ನೂರು ದಿನದ ಸಂಭ್ರಮ ಮಾಡುತ್ತಿದೆ. ಕಾವೇರಿ ಪ್ರಾಧಿಕಾರ ರಚನೆಯಾದಾಗಿನಿಂದ ತಮಿಳುನಾಡು ಸರ್ಕಾರ ವಿಶೇಷ ಕಾಳಜಿ ವಹಿಸಿ ನೀರು ಪಡೆದುಕೊಳ್ಳುತ್ತಿದೆ. ನಮ್ಮ ರಾಜ್ಯಗಳ ಪರವಾಗಿ ವಾದ ಸಮರ್ಪಕವಾಗಿ ಮಾಡದ ಕಾರಣ ಹಿನಡೆಯಾಗುತ್ತಿದೆ. ನ್ಯಾಯಾಧೀಕರಣದ ಮುಂದೆ ಸಮರ್ಪಕವಾಗಿ ವಾದ ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಕಾವೇರಿ ವಿಚಾರದಲ್ಲಿ ನ್ಯಾಯ ಸಿಗದಿದ್ದರೆ ರೈತರು ಬೀದಿಗಿಳಿದು ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಪ್ರತಿಭಟನೆಯಲ್ಲಿ ಬಿ.ಸಿ.ಕೃಷ್ಣೇಗೌಡ, ಹನಿಯಂಬಾಡಿ ನಾಗರಾಜು, ಮಹದೇವು, ರವಿಲಕ್ಷ್ಮಣ, ಮಹೇಶ್, ಶಿವಣ್ಣ, ಸ್ವಾಮಿ ಶಿವರಾಜು, ಸಿದ್ದೇಗೌಡ, ವಸಂತಕುಮಾರ್, ಜಯರಾಂ ಸೇರಿದಂತೆ ಭೂಮಿ ತಾಯಿ ಹೋರಾಟ ಸಮಿತಿ ಸದಸ್ಯರು, ರೈತರು ಭಾಗವಹಿಸಿದ್ದರು.


ಪ್ರತಿಭಟನೆ ಹಿನ್ನೆಲೆಯಲ್ಲಿ ಕೆ.ಆರ್. ಸಾಗರ ಅಣೆಕಟ್ಟೆ ಮುಂಭಾಗ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ನೇತೃತ್ವದಲ್ಲಿ ಡಿವೈಎಸ್‌ಪಿ, ವೃತ್ತ ನಿರೀಕ್ಷಕ, ಮೂವರು ಪಿಎಸ್‌ಐಗಳು, ಕೆಎಸ್‌ಆರ್‌ಪಿ, ಡಿಆರ್ ತುಕಡಿ ಮತ್ತು ಕೆ.ಆರ್.ಸಾಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನು ವಿವಿಧ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.