- ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹ
- ರಾಜ್ಯ ಸರ್ಕಾರದ ವಿರುದ್ಧ ರೈತ ಸಂಘ ಆಕ್ರೋಶ
ವಿಜಯವಾಣಿ ಸುದ್ದಿಜಾಲ ಶ್ರೀರಂಗಪಟ್ಟಣ
ರಾಜ್ಯದ ರೈತರಿಗೆ ಅನ್ಯಾಯ ಎಸಗಿ ತಮಿಳುನಾಡಿಗೆ ಕನ್ನಂಬಾಡಿ ಜಲಾಶಯದಿಂದ ಹರಿಸುತ್ತಿರುವ 12 ಸಾವಿರ ಕ್ಯೂಸೆಕ್ ನೀರನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತತರು ಕಾವೇರಿ ನದಿಗಿಳಿದು ಪ್ರತಿಭಟಿಸಿದರು.
ಪಟ್ಟಣದ ಸ್ನಾನಘಟ್ಟದಲ್ಲಿ ಬುಧವಾರ ರೈತ ಸಂಘದ ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ಅವರ ನೇತೃತ್ವದಲ್ಲಿ ಕಾವೇರಿ ನದಿಗಿಳಿದ ರೈತ ಹೋರಾಟಗಾರರು, ಅರ್ಧ ತಾಸು ಪ್ರತಿಭಟಿಸಿ ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿದರು.
ರೈತ ಮುಖಂಡರಾದ ಮರಳಗಾಲ ಕೃಷ್ಣೇಗೌಡ ಮಾತನಾಡಿ, ಮುಂಗಾರು ಮಳೆ ಕೊರತೆಯಿಂದ ಜಲಾಶಯದಲ್ಲಿ ಅಗತ್ಯ ನೀರು ಲಭ್ಯವಿಲ್ಲದೆ 1 ಬೆಳೆ ಕಳೆದುಕೊಳ್ಳುವ ಜತೆಗೆ ನಷ್ಟ ಅನುಭವಿಸಿ ನೊಂದಿದ್ದ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕೆಲದಿನಗಳ ಹಿಂದೆ ಸುರಿದ ಮಳೆಯಿಂದ ಕನ್ನಂಬಾಡಿ ಅಣೆಕಟ್ಟೆಯಲ್ಲಿ 113 ಅಡಿ ನೀರು ಸಂಗ್ರಹವಾಗಿ ಭರವಸೆ ಮುಡಿಸಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಈಗಿರುವ ಬೆಳೆ ರಕ್ಷಿಸಿಕೊಳ್ಳಲು ನಾಲೆಗಳಿಗೆ ನೀರು ಹರಿಸುವುದಾಗಿ ತಿಳಿಸಿ ಅರ್ಧಂಬರ್ಧ ನೀರು ಹರಿಸಿ ನಿಲ್ಲಿಸಿತು. ಈ ಹಂಗಾಮಿನಲ್ಲಿ ರೈತರು ಕಟ್ಟು ನೀರು ಪದ್ಧತಿಯಲ್ಲಿ 6 ತಿಂಗಳ ಅವಧಿಗೆ 1 ಬೆಳೆ ಮಾತ್ರ ಬೆಳೆಯುವಂತೆ ತಾಕೀತು ಮಾಡಿದೆ. ಆದರೆ ನಿಗದಿತ ಸಮಯದಲ್ಲಿ ವಿಸಿ, ವಿರಿಜಾ ಹಾಗೂ ಸಿಡಿಎಸ್ ನಾಲೆಗಳಿಗೆ ಅಗತ್ಯ ಪ್ರಮಾಣದ ನೀರು ಹರಿಸಲು ಮೀನಮೇಷ ಏಣಿಸುತ್ತಿದೆ ಎಂದು ಆಸಮಾಧಾನ ವ್ಯಕ್ತಪಡಿಸಿದರು.
ಮತ್ತೊಬ್ಬ ರೈತ ಮುಖಂಡ ಕಡತನಾಳು ಬಾಲಕೃಷ್ಣ ಮಾತನಾಡಿ, ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಈಗಾಗಲೇ ಸಾಕಷ್ಟು ನೀರು ಸಂಗ್ರಹವಿದೆ. ಇಷ್ಟಿದ್ದರೂ ಕುಡಿಯುವ ನೀರಿನ ನೆಪವೊಡ್ಡಿ ಕೆ.ಆರ್.ಎಸ್. ಜಲಾಶಯದಿಂದ ನಿತ್ಯ 12 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ತಮಿಳಿಗರು ಅವರ ಪಾಲಿನ ನೀರು ಪಡೆಯುತ್ತಿದ್ದಾರೆ. ಕರ್ನಾಟಕಕ್ಕೆ ಬರಗಾಲ ಆವರಿಸಿ ರೈತರು ನೊಂದಿರುವುದು ಮನಗಂಡಿದ್ದರೂ ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ಸರ್ವೋಚ್ಚ ನ್ಯಾಯಾಲಯವು ರಾಜ್ಯಕ್ಕೆ ಅನ್ಯಾಯ ಎಸಗಿ ಭವಿಷ್ಯದಲ್ಲಿ ಕರ್ನಾಟಕದ ಜನರ ಪಾಲಿಗೆ ಮರಣ ಶಾಸನ ಬರೆಯುತ್ತಿದೆ. ರಾಜ್ಯದ ರೈತರ ಹಿತ ಕಾಪಾಡದೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಕೂಡಲೇ ತಮುಳುನಾಡಿಗೆ ಹರಿಸುತ್ತಿರುವ ಅಧಿಕ ನೀರು ನಿಲ್ಲಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ರೈತ ಮುಖಂಡರಾದ ದೊಡ್ಡಪಾಳ್ಯ ಜಯರಾಮೇಗೌಡ, ಶಂಕರ್, ವೈ.ಕೆ.ರಮೇಶ್, ನೀಲನಕೊಪ್ಪಲು ಶಶಿಕಾಂತ್, ಕೂಡಲಕುಪ್ಪೆ ಜಯರಾಮು, ಶಶಿಧರ್, ನಾಗರಾಜು, ಡಿ.ಎಂ.ಕೃಷ್ಣೇಗೌಡ, ಪುರುಷೋತ್ತಮ್, ನಾಗರಾಜು ಅಗ್ರಹಾರ ಇತರರು ಇದ್ದರು.
.