ಜಿಲ್ಲೆ

ಕಾವೇರಿ ನದಿಗಿಳಿದು ಪ್ರತಿಭಟನೆ

ಶ್ರೀರಂಗಪಟ್ಟಣ: ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ತಕ್ಷಣ ನಿಲ್ಲಿಸುವಂತೆ ಜಿಲ್ಲೆಯ ಜನಪ್ರನಿಧಿಗಳು ರಾಜ್ಯ ಸರ್ಕಾರದ ಸರ್ವಪಕ್ಷಗಳ ಸಭೆಯಲ್ಲಿ ಆಗ್ರಹಿಸಿ ಧ್ವನಿ ಎತ್ತದಿದ್ದರೆ ಮಂಡ್ಯ ಜಿಲ್ಲೆಯ ರೈತರು ನಿಮ್ಮನ್ನು ಕಂಡಲ್ಲಿ ಕೊರಳುಪಟ್ಟಿ ಹಿಡಿದು ಪ್ರಶ್ನಿಸಲಿದ್ದಾರೆ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಎಚ್ಚರಿಸಿದರು.


ಪಟ್ಟಣದ ಸ್ನಾನಘಟ್ಟದಲ್ಲಿ ಬುಧವಾರ ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರೈತ ಕಾರ್ಯಕರ್ತರೊಂದಿಗೆ ಕಾವೇರಿ ನದಿಯೊಳಗೆ ಇಳಿದು, ಕನ್ನಂಬಾಡಿ ಜಲಾಶಯದಿಂದ ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿ ಬಳಿಕ ಅವರು ಮಾತನಾಡಿದರು.


ನದಿ ನೀರಿನ ಹಂಚಿಕೆ ವಿಚಾರ ನ್ಯಾಯಾಧೀಕರಣಕ್ಕೆ ಕಾವೇರಿ ಮಾತ್ರ ಒಳಪಟ್ಟಿದ್ದು, ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗಿದೆ. ಹಿಂದಿನಿಂದಲೂ ನಮ್ಮನ್ನಾಳಿದ ಯಾವುದೇ ರಾಜ್ಯ ಸರ್ಕಾರಗಳು ಕೆಆರ್‌ಎಸ್‌ನಲ್ಲಿ ನಮಗೆ ಸಿಗಬೇಕಾದ ನೀರು ಉಳಿಸಿ, ನಮ್ಮ ರೈತರ ಕೃಷಿ ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರು ದೊರಕಿಸಲು ಪೂರಕವಾಗಿ ನ್ಯಾಯಾಲಯಕ್ಕೆ ಅಗತ್ಯ ಮಾಹಿತಿ, ದಾಖಲೆ ಒದಗಿಸುವಲ್ಲಿ ವಿಫಲವಾಗಿವೆ. ಈವರೆಗೂ ನ್ಯಾಯ ದೊರಕಿಸಿಲ್ಲ ಎಂದರು.


ಕರ್ನಾಟಕದಲ್ಲೇ ಹುಟ್ಟಿ ಶೇ.70ರಷ್ಟು ರಾಜ್ಯದಲ್ಲೇ ಹರಿಯುವ ಕಾವೇರಿ ನದಿಯ ಬಳಕೆ ಕೇವಲ ಶೇ.30ರಷ್ಟು ದೊರಕದಿರುವುದು ಈ ರಾಜ್ಯದ ಪಾಲಿಗೆ ದುರದೃಷ್ಟಕರ. ಕೇಂದ್ರದಲ್ಲಿ ಯಾವುದೇ ಸರ್ಕಾರಗಳು ಆಡಳಿತದಲ್ಲಿದ್ದರೂ ತಮಿಳುನಾಡು ಸರ್ಕಾರ ಹಾಗೂ ಅಲ್ಲಿನ ಜನಪ್ರನಿಧಿಗಳು ಒಗ್ಗಟ್ಟಿನಿಂದ ರಾಷ್ಟ್ರಪತಿ, ಪ್ರಧಾನಿ ಆದಿಯಾಗಿ ಒತ್ತಡ ಹೇರಿ ತಮ್ಮ ಪಾಲಿನ ನೀರು ಪಡೆಯುತ್ತಿದ್ದು, ನಮ್ಮ ರಾಜ್ಯದ ಜನಪ್ರನಿಧಿಗಳು ಹೇಡಿತನ ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದರು.


ಪ್ರಸ್ತುತ ಲೋಕಸಭೆ ಚುನಾವಣೆ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಿಎಂ ಸ್ಟಾಲಿನ್ ಅವರನ್ನು ಓಲೈಸಲು ರಾಜ್ಯದ ಕಾವೇರಿ ಕಣಿವೆಯ ರೈತಾಪಿ ಜನರ ಕೃಷಿಗೂ ನಾಲೆಗಳಿಗೆ ನೀರು ಕೊಡದಂತೆ ಅನ್ಯಾಯವೆಸಗಿ ನಿರಂತರವಾಗಿ ನೀರು ಹರಿಸುತ್ತಿದ್ದಾರೆ. ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗದ ಈ ಸರ್ಕಾರ ಏಕಾಏಕಿ ನೀರು ಬಿಟ್ಟು, ಜಲಾಶಯಗಳನ್ನು ಬರಿದು ಮಾಡಿ, ಕುಡಿಯುವ ನೀರಿಗೂ ತತ್ವಾರ ತಂದು ಇದೀಗ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.


ಸಚಿವ ಡಿ.ಕೆ.ಶಿವಕುಮಾರ್ ಕ್ಷಮೆಗೆ ಆಗ್ರಹ: ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಚಂಡ ಜಯಭೇರಿ ಗಳಿಸಿರುವ ಗುಂಗಿನಲ್ಲಿದ್ದು, ದುರಹಂಕಾರದ ಆಡಳಿತದಲ್ಲಿದ್ದಾರೆ. ಈ ಧಿಮಾಕಿನಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾವೇರಿ ಹೋರಾಟಗಾರರ ಬಗ್ಗೆ ನ್ಯಾಯಾಲಯಕ್ಕೆ ಹೋಗುವಂತೆ ಉಡಾಫೆ ಉತ್ತರ ನೀಡಿದ್ದಾರೆ. ಹಿಂದೆ ವಿರೋಧ ಪಕ್ಷದಲ್ಲಿದ್ದ ವೇಳೆ ಕಾವೇರಿಗಾಗಿ ಪಾದಯಾತ್ರೆಯ ಬೃಹತ್ ನಾಟಕವಾಡಿದ ಈ ಮಂತ್ರಿ ಅಧಿಕಾರದಲ್ಲಿದ್ದು, ಜಲಸಂಪನ್ಮೂಲ ಸಚಿವ ಸ್ಥಾನದಲ್ಲಿದ್ದರೂ ತಟಸ್ಥತೆ ಕಾಯ್ದುಕೊಂಡು ದ್ವಂದ್ವ ನೀತಿಯ ಹೇಡಿತನ ಪ್ರದರ್ಶಿಸಿದ್ದಾರೆ. ಕಾವೇರಿ ಹೋರಾಟಗಾರರ ವಿಚಾರದಲ್ಲಿ ಕ್ಷಮೆ ಕೋರದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಹೋರಾಟಗಾರರು ನದಿಗಿಳಿದು ಪ್ರತಿಭಟಿಸಿದ್ದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ನದಿಯಲ್ಲಿ ಹಗ್ಗಕಟ್ಟಿ ರಕ್ಷಣೆ ಒದಗಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿ ಭದ್ರತೆ ಕೈಗೊಂಡಿದ್ದರು.


ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಮಹದೇವು, ಉಪಾಧ್ಯಕ್ಷರು ಹನಿಯಂಬಾಡಿ ನಾಗರಾಜು, ಮೇಳಾಪುರ ಜಯರಾಮೇಗೌಡ, ಸಂಚಾಲಕ ಬಿ.ಮಂಜುನಾಥ್, ಸುನೀಲ್, ಬಾಬು, ಪೈ.ನಾಗಣ್ಣ, ಮಹಲಿಂಗು, ಕಪರನಕೊಪ್ಪಲು ಸುರೇಶ್, ಮೊಳ್ಳೆನಹಳ್ಳಿಕೊಪ್ಪಲು ಚಂದ್ರು, ನೀಲನಕೊಪ್ಪಲು ಭದ್ರಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ರವಿ ಲಕ್ಷ್ಮಣ್ಣ, ಪುಟ್ಟಸ್ವಾಮಿ ಮಲ್ಲೇಗೌಡನಕೊಪ್ಪಲು, ಬಲ್ಲೇನಹಳ್ಳಿ ಮಹೇಶ್, ಹೆಬ್ಬಾಡಿಹುಂಡಿ ಸಿದ್ದೇಗೌಡ, ಕಡತನಾಳು ಚಾಮರಾಜು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.