ರಾಮನಾಥಪುರ: ಇಲ್ಲಿನ ಐತಿಹಾಸಿಕ ಶ್ರೀರಾಮೇಶ್ವರ ದೇವಾಲಯ ಸನ್ನಿಧಿಯ ಪವಿತ್ರ ಕಾವೇರಿ ನದಿಯಲ್ಲಿ ಶುಕ್ರವಾರ ಸಂಜೆ 67ನೇ ಹುಣ್ಣಿಮೆ ಪ್ರಯುಕ್ತ ನದಿಗೆ ಆರತಿ ಪೂಜೆ ಹಾಗೂ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿತ್ತು.
ಕಾವೇರಿ ನದಿ ಸ್ವಚ್ಛತಾ ಅಂದೋಲನಾ ಸಮಿತಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ನಾಡ ಕಚೇರಿ ಹಾಗೂ ಅರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪ ತಹಸಿಲ್ದಾರ್ ಜಿ.ಸಿ.ಚಂದ್ರು ಮಾತನಾಡಿ, ಅತಿಯಾದ ಪ್ಲಾಸ್ಟಿಕ್ ಬಳಕೆ ಪರಿಸರ ಹಾಗೂ ಜಲ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಎಲ್ಲರೂ ಸ್ವಚ್ಛ ಪರಿಸರದ ಉಳಿವಿಗೆ ಕಾರಣೀಭೂತರಾಗಬೇಕಿದೆ ಎಂದರು.
ಲಾಕ್‌ಡೌನ್ ಸಡಿಲಿಕೆಯಿಂದ ಹೆಚ್ಚಿನ ಜನಸಂದಣಿ ಪ್ರಾರಂಭವಾಗಿದ್ದು, ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದ ಬರುವವರ ಬಗ್ಗೆ ಸಾರ್ವಜನಿಕರು, ಸ್ಥಳೀಯರು ಕರೊನಾ ಕಾರ್ಯಪಡೆಗೆ ಮಾಹಿತಿ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ರಾಜಸ್ವ ನಿರೀಕ್ಷಕ ಸಿ.ಸ್ವಾಮಿ ಮಾತನಾಡಿ, ಜೀವನದಿ ಕಾವೇರಿಯ ಗಂಭೀರ ಸಮಸ್ಯೆಯ ಬಗ್ಗೆ ಹಲವು ಜಾಗೃತಿ, ಅರಿವು ಮೂಡಿಸುವ ಕಾರ್ಯ ಯೊಜನೆಗಳು ಸಾಗಬೇಕಾಗಿದೆ. ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿ ಸ್ವಚ್ಛತಾ ಸಮಿತಿಗೆ ಎಲ್ಲ ರೀತಿಯಲ್ಲಿಯೂ ಸಹಕರಿಸುವಂತೆ ಮನವಿ ಮಾಡಿದರು.
ಕಾವೇರಿ ನದಿ ಸ್ವಚ್ಛತಾ ಅಂದೋಲನಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಎನ್.ಕುಮಾರಸ್ವಾಮಿ, ಆರ್ಯುವೇದ ಅಸ್ಪತ್ರೆ ವೈದ್ಯಾಧಿಕಾರಿ ಡಾ.ಹರ್ಷ, ಗ್ರಾಪಂ ಕಾರ್ಯದರ್ಶಿ ನಿಂಗಣ್ಣ, ಪೊಲೀಸ್ ಪೇದೆ ಸೈಯ್ಯದ್ ವಾಜಿದ್, ಗ್ರಾಮ ಲೆಕ್ಕಿಗ ಧಮೇಶ್, ಶಿಕ್ಷಕಿ ಸುಧಾಮಣಿ, ಸಮಿತಿ ಖಜಾಂಚಿ ರಘು, ಕಾರ್ಯದರ್ಶಿ ಕುಮಾರಸ್ವಾಮಿ ರಾವ್, ತಾಲೂಕು ಅಧ್ಯಕ್ಷ ಸಿದ್ದರಾಜು, ಸಂಘಟನಾ ಕಾರ್ಯದರ್ಶಿ ಶಿವಪ್ಪ, ಸದಸ್ಯರಾದ ಬಸವರಾಜು, ಅಶ್ವಿನ್ ಭಾರದ್ವಾಜ್, ವಿಕ್ರಮ್ ಭಾರದ್ವಾಜ್ ಮತ್ತಿತರರು ಹಾಜರಿದ್ದರು.
ದೇವಾಲಯದ ಮುಖ್ಯ ಅರ್ಚಕರು ಶ್ರೀನಿವಾಸ್, ಸಹ ಅರ್ಚಕರಾದ ಉಮೇಶ್, ರವೀಶ್ ಕಾವೇರಿ ಆರತಿ ಪೂಜಾ ಕೈಂಕರ್ಯ ನಡೆಸಿಕೊಟ್ಟರು.