ಮೈಸೂರು: ಹೇಮಾವತಿ ಅಚ್ಚುಕಟ್ಟು ನಾಲೆಗಳಿಗೆ ನೀರು ಹರಿಸಿ, ಕಾವೇರಿ ಕೊಳ್ಳದ ಎಲ್ಲ ಕೆರೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ನಗರದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು, ಹೇಮಾವತಿ ಜಲಾಶಯ ಭಾಗದ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ, ಮಂಡ್ಯ ತಾಲೂಕಿನ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಬೆಳೆಗಳು ಬೇಸಿಗೆಯ ಸುಡು ಬಿಸಿಲಿಗೆ ನೀರಿಲ್ಲದೆ ಒಣಗುತ್ತಿವೆ. ಆದ್ದರಿಂದ ಕೂಡಲೇ ನಾಲೆಗಳಿಗೆ ನೀರು ಹರಿಸಿ ಬೆಳೆಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದರು
ಹೇಮಾವತಿ ಜಲಾಶಯ ವ್ಯಾಪ್ತಿಯ ಎಲ್ಲ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲ ಮಾಡಿಕೊಡಬೇಕು. ಕಾವೇರಿ ಕೊಳ್ಳದ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಮೈಸೂರು ವಿಭಾಗದ ಎಲ್ಲ ಜಿಲ್ಲೆಗಳಲ್ಲಿ ಕೃಷಿ ಪಂಪ್ ಸೆಟ್‌ಗಳಿಗೆ ಹಗಲು ವೇಳೆ ಕನಿಷ್ಠ 7 ಗಂಟೆಗಳ ಕಾಲ ಗುಣಮಟ್ಟದ ತ್ರಿ ಪೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಎಂ.ಎಲ್.ಕೆಂಪುಗೌಡ, ಹೊಸಕೋಟೆ ಬಸವರಾಜು, ಜಿ.ಎಸ್.ಲಿಂಗರಾಜು, ಕೆ.ಆರ್.ಜಯರಾಮ್, ಪಿ.ಮರಂಕಯ್ಯ ಇತರರಿದ್ದರು.