ವಿರಾಜಪೇಟೆ: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ದಾಖಲಾತಿ ಪ್ರಾರಂಭವಾಗಿದ್ದು, ಜೂ.10ರೊಳಗೆ ಪ್ರವೇಶಾತಿ ಪಡೆದುಕೊಳ್ಳಬಹುದು ಎಂದು ಕಾಲೇಜಿನ ಉಪ ಪ್ರಾಂಶುಪಾಲ ಡಾ.ಆನಂದ್ ಕಾರ್ಲ ಹೇಳಿದರು.
1980ರಲ್ಲಿ ಪ್ರಥಮವಾಗಿ ಕಾವೇರಿ ಮಹಿಳಾ ಕಾಲೇಜು ಪ್ರಾರಂಭಗೊಂಡಿತು. 2018ರಲ್ಲಿ ಮಹಿಳಾ ಹಾಗೂ ಪುರುಷರಿಗೆ ಪ್ರತ್ಯೇಕ ವಿಭಾಗದಲ್ಲಿ ತರಗತಿ ಆರಂಭವಾಯಿತು. ಮಂಗಳೂರು ವಿಶ್ವವಿದ್ಯಾಲಯದಿಂದ ನ್ಯಾಕ್ ಬಿ+ ಪ್ರಮಾಣಪತ್ರ ಪಡೆದುಕೊಂಡಿದ್ದು, ಕಾಲೇಜಿನಲ್ಲಿ ಬಿ.ಎ, ಬಿ.ಕಾಂ, ಬಿ.ಬಿ.ಎ. ಕೋರ್ಸ್‌ಗಳಿವೆ. ಉತ್ತಮ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದು, ಈ ಬಾರಿ ಬಿ.ಬಿ.ಎ.ಗೆ ಶೇ.100ರ ಫಲಿತಾಂಶ ಬಂದಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷದವರೆಗೆ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಪಾಠ-ಪ್ರವಚನ ನಡೆಯುತ್ತಿತ್ತು. ಈ ಬಾರಿ 10 ರಿಂದ 2.45ರವರೆಗೆ ಶೈಕ್ಷಣಿಕ ತರಗತಿ ನಡೆಯಲಿದೆ. 2.45ರಿಂದ 3.35ರವರೆಗೆ ಕ್ರೀಡೆ, ಇತರ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುವುದು. ಪ್ರತಿ ಬುಧವಾರದಂದು ಸರ್ಟಿಫಿಕೇಟ್ ಕೋರ್ಸ್‌ಗಳಾದ ಬ್ಯೂಟಿಷಿಯನ್, ಫ್ಯಾಷನ್ ಡಿಸೈನಿಂಗ್, ಇಂಗ್ಲಿಷ್, ಕಂಪ್ಯೂಟರ್, ಯೋಗ ಕರಾಟೆ ತರಗತಿಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಎಸ್ಸಿ- ಎಸ್ಟಿ ವಿದ್ಯಾರ್ಥಿಗಳು, ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಂಡವನ್ನು ಪ್ರತಿನಿಧಿಸಿದವರಿಗೆ ಮತ್ತು ಅಂಗವಿಕಲರಿಗೆ ವಿದ್ಯಾರ್ಥಿ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಹೇಳಿದರು.
ಅರ್ಥಶಾಸ್ತ್ರ ಉಪನ್ಯಾಸಕ ಬೆನಡಿಕ್ಟ್ ಸಾಲ್ಡನಾ, ಇಂಗ್ಲಿಷ್ ಉಪನ್ಯಾಸಕಿ ಡಾ.ಕುಪ್ಪಂಡ ವೀಣಾ ರವೀಂದ್ರ ಸುದ್ದಿಗೋಷ್ಠಿಯಲ್ಲಿದ್ದರು.