ಜಿಲ್ಲೆ

ಕಾವೇರಿ 2.0ಗೆ ಆರಂಭದಲ್ಲೇ ವಿಗ್ನ, ಆಮೆಗತಿಯಲ್ಲಿ ನೋಂದಣಿ ಕಾರ್ಯ

ಆರ್.ಕೃಷ್ಣ ಮೈಸೂರು
ನೂತನ ತಂತ್ರಾಂಶ ‘ಕಾವೇರಿ 2.0’ ಅಳವಡಿಕೆಗೆ ಮುಂದಾಗಿರುವ ಉಪ ನೋಂದಣಿ ಕಚೇರಿಯಲ್ಲಿ ಆರಂಭದಲ್ಲಿಯೇ ತಾಂತ್ರಿಕ ದೋಷ ಕಾಣಿಸಿಕೊಳ್ಳಲಾರಂಭಿಸಿದೆ. ಇದರಿಂದ ಮೈಸೂರಿನ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಆಮೆಗತಿಯಲ್ಲಿ ಸಾಗಿದ್ದು, ಬಹುತೇಕ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಒಂದೊಂದು ಉಪ ನೋಂದಣಿ ಕಚೇರಿಯಲ್ಲಿ ದಿನವೊಂದಕ್ಕೆ 100ರಿಂದ 120ರ ವರೆವಿಗೂ ನಡೆಯುತ್ತಿದ್ದ ನೋಂದಣಿಗಳು ಈಗ ಕೇವಲ 18ರಿಂದ 20ಕ್ಕೆ ಕುಸಿದಿದೆ. ನೋಂದಣಿಗೆ ಕಾರ್ಯ ಆಗದಿರುವುದಕ್ಕೆ ಎಂದಿನಂತೆ ‘ಸರ್ವರ್ ಡೌನ್’ ಎನ್ನುವ ಕಾರಣ ಹೇಳಲಾಗುತ್ತಿದೆ.
ಹೀಗಾಗಿ ಆಸ್ತಿ ನೋಂದಣಿ, ಪರಭಾರೆ ಸೇರಿದಂತೆ ಇತರ ದಾಖಲೆಗಾಗಿ ಕಚೇರಿಗೆ ಬರುವ ಜನರು ದಿನಗಟ್ಟಲೇ ಕಾಯ್ದರೂ ನೋಂದಣಿ ಕಾರ್ಯ ಆಗಲಿದೆ ಎನ್ನುವ ಖಾತ್ರಿಯೇ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಕಚೇರಿ ಬಳಿ ಜನರು ಸಾಲುಗಟ್ಟಿ ನಿಲ್ಲಬೇಕಿದೆ. ಜತೆಗೆ ಉಪ ನೋಂದಣಿ ಕಚೇರಿಯಲ್ಲಿ ಜನರಿಗೆ ತೊಂದರೆ ನೀಡಲಾಗುತ್ತಿದೆ, ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ ಎನ್ನುವ ದೂರುಗಳು ಕೇಳಿ ಬರುತ್ತಲೇ ಇವೆ. ಹೀಗಾಗಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರ ಹಲವು ಸುಧಾರಣೆ ಜಾರಿಗೊಳಿಸಲು ಮುಂದಾಗಿದ್ದರೂ, ಅವುಗಳಲ್ಲಿಯೂ ಅನೇಕ ತೊಂದರೆ ಕಾಣಿಸಿಕೊಂಡು ಸುಧಾರಣೆಗಿಂತ ಅಡಚಣೆಯೇ ಹೆಚ್ಚು ಎನ್ನುವ ಮಾತು ಕೇಳಿ ಬರುತ್ತಿದೆ.
ಕಂದಾಯ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಮುದ್ರಾಂಕ ಹಾಗೂ ನೋಂದಣಿ ವಿಭಾಗವು ಜನಸಾಮಾನ್ಯರೊಂದಿಗೆ ನೇರ ಸಂಪರ್ಕ ಹೊಂದಿರುವ ಇಲಾಖೆಯಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 21 ಲಕ್ಷಕ್ಕೂ ಹೆಚ್ಚಿನ ದಾಖಲಾತಿಗಳ ನೋಂದಣಿ ನಡೆಸಿದೆ. ಇದರಿಂದ ಸರ್ಕಾರಕ್ಕೆ 14,600 ಕೋಟಿ ರೂ. ಶುಲ್ಕ ಸಂಗ್ರಹವಾಗಿದೆ. ಹೀಗಾಗಿ ನೋಂದಣಿ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿ ಜನಸ್ನೇಹಿಯನ್ನಾಗಿಸಲು ಪ್ರತಿ ಜಿಲ್ಲಾ ವ್ಯಾಪ್ತಿಯಲ್ಲಿ ಹಂತ, ಹಂತವಾಗಿ ನೂತನ ತಂತ್ರಾಂಶ ಕಾವೇರಿ 2.0 ಅನ್ನು ಅಳವಡಿಸಲಾಗುತ್ತಿದೆ.
ನೂತನ ತಂತ್ರಜ್ಞಾನದಿಂದ ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಸಾರ್ವಜನಿಕರು ಮನೆಯಲ್ಲಿಯೇ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಆಲ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಬಹುದು. ಅಲ್ಲದೇ ತಮಗೆ ಅನುಕೂಲಕರವಾದ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇದರಿಂದ ನೋಂದಣಿಗೆ ಕಾಯುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ನೂತನ ತಂತ್ರಾಂಶದಲ್ಲಿಯೂ ಆರಂಭಿಕ ಆಡಚಣೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಕಾವೇರಿ 2.0 ನಲ್ಲಿ ದಾಖಲೆ ಭರ್ತಿ ಮಾಡಲು ಜನರು ತಮ್ಮ ಕಂಪ್ಯೂಟರ್‌ನಲ್ಲಿ ತಂತ್ರಾಂಶ ಅಳವಡಿಸಿಕೊಳ್ಳಬೇಕು. ಜತೆಗೆ ತಂತ್ರಾಂಶದಲ್ಲಿ ಕೊಟ್ಟಿರುವ ಮಾಹಿತಿಯನ್ನು ಭರ್ತಿ ಮಾಡಲು ಅದರ ಬಗ್ಗೆ ತಿಳಿದುಕೊಳ್ಳುವುದು ಕಡ್ಡಾಯವಾಗಿದೆ. ತಮ್ಮ ಆಸ್ತಿ ಯಾವ ನೋಂದಣಿ ಕಚೇರಿಯ ವ್ಯಾಪ್ತಿಗೆ ಸೇರಿದೆ ಎನ್ನುವ ಮಾಹಿತಿ ಗೊತ್ತಿರಬೇಕು.
ಕೆಲ ವಿದ್ಯಾವಂತರು ನೂತನ ತಂತ್ರಾಂಶದಲ್ಲಿ ಮಾಹಿತಿ ಭರ್ತಿ ಮಾಡಿದರೆ, ಮಾಹಿತಿ ಸರಿಯಾಗಿ ತಿಳಿಯದವರು ಮತ್ತೆ ಮಧ್ಯವರ್ತಿಗಳು ಅಥವಾ ಕಂಪ್ಯೂಟರ್ ಸೆಂಟರ್‌ಗಳ ಮೊರೆ ಹೋಗಬೇಕಾಗಿದೆ. ಇದರಿಂದ ಜನರು ಹೆಚ್ಚುವರಿ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಹಿಂದೆ ದಾಖಲೆಗಳನ್ನು ಉಪ ನೋಂದಣಿ ಕಚೇರಿಗೆ ಹಾಜರುಪಡಿಸಿ ನಿಗದಿತ ಶುಲ್ಕ ಪಾವತಿಸಿ ನೋಂದಣಿ ಶುಲ್ಕ ಪಾವತಿಸಲು ಅವಕಾಶವಿತ್ತು. ಆದರೆ ನೂತನ ಕಾವೇರಿ ತಂತ್ರಾಂಶ 2.0 ಜಾರಿಗೊಂಡಿರುವುದರಿಂದ ಕಚೇರಿಯಲ್ಲಿ ದಾಖಲೆಗಳನ್ನು ಹಾಜರುಪಡಿಸಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿಲ್ಲ. ಇದರಿಂದ ಉಂಟಾಗುತ್ತಿರುವ ತೊಂದರೆ ನಿವಾರಣೆ ಆಗುವವರೆಗೂ ಆಫ್‌ಲೈನ್‌ನಲ್ಲಿಯೇ ನೋಂದಣಿ ಕಾರ್ಯ ನಡೆಸಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.

ಲಾಗಿನ್‌ನಲ್ಲಿಯೇ ತೊಂದರೆ
ಕಾವೇರಿ 2.0 ನಲ್ಲಿ ಆರಂಭದಲ್ಲಿಯೇ ಲಾಗಿನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಲಾಗಿನ್ ಅಗಲು ಒಟಿಪಿ ನಮೂದಿಸುವುದು ಕಡ್ಡಾಯವಾಗಿದೆ. ಆದರೆ ಮೊಬೈಲ್‌ಗೆ ಒಟಿಪಿ ಬರುವುದೇ ಬಹಳಷ್ಟು ತಡವಾಗುತ್ತಿದೆ. ಒಂದೊಮ್ಮೆ ಬಂದರೂ ಅದನ್ನು ದಾಖಲಿಸುವ ವೇಳೆಗೆ ವೆಬ್‌ಸೈಟ್ ಟೈಮ್ ಔಟ್ ಆಗುತ್ತದೆ. ಕೆಲವೊಮ್ಮೆ ಒಟಿಪಿಯೇ ಬರುವುದಿಲ್ಲ.

ವೆಬ್‌ಸೈಟ್ ಓಪನ್ ಆದರೂ ದಾಖಲಾತಿಗಳನ್ನು ಸ್ಕಾೃನ್ ಮಾಡಿ ಅಪ್‌ಲೋಡ್ ಮಾಡಲು ತೊಡಕಾಗುತ್ತಿದೆ. ಸ್ಕಾೃನ್ ಮಾಡಿದ ದಾಖಲೆಯನ್ನು ಅಪ್‌ಲೋಡ್ ಮಾಡುತ್ತಿರುವಂತೆಯೇ ಸರ್ವರ್ ಸಮಸ್ಯೆ ಕಾಡುತ್ತದೆ. ಒಂದು ದಾಖಲೆ ಅಪ್‌ಲೋಡ್‌ಗೆ 5ರಿಂದ 10 ನಿಮಿಷ ತೆಗೆದುಕೊಳ್ಳುತ್ತದೆ ಎನ್ನುವ ದೂರಿದೆ.

ಸದ್ಯಕ್ಕೆ ಎರಡೂ ಪದ್ಧತಿ ಇರಲಿ
ನೂತನ ತಂತ್ರಾಂಶದಲ್ಲಿ ಜನರು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಪ್ರಕ್ರಿಯೆ ಮಾಡಬೇಕಿರುವುದರಿಂದ ಸಮಸ್ಯೆ ಆಗುತ್ತಿದೆ. ಆದ್ದರಿಂದ ಆಫ್‌ಲೈನ್ ಹಾಗೂ ಆನ್‌ಲೈನ್ ಎರಡೂ ಪದ್ಧತಿಗಳು ಇರಲಿ. ಜನರಿಗೆ ಯಾವುದು ಅನುಕೂಲವೂ ಅದರ ಮೂಲಕ ನೋಂದಣಿ ಕಾರ್ಯ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕಿದೆ.
ಎಂ.ಎನ್.ರಘುವೀರ್, ಸಿದ್ಧಾರ್ಥ ಬಡಾವಣೆ ನಿವಾಸಿ

ಮಾಹಿತಿ ನೀಡಲಾಗಿದೆ
ಜಿಲ್ಲೆಯಲ್ಲಿ ಕಾವೇರಿ 2.0 ತಂತ್ರಾಂಶ ಜಾರಿಗೊಳಿಸಲಾಗಿದ್ದು, ಆರಂಭಿಕ ಸಮಸ್ಯೆಗಳ ಬಗ್ಗೆ ಇಂಜಿನಿಯರಿಂಗ್ ವಿಭಾಗಕ್ಕೆ ಮಾಹಿತಿ ನೀಡಲಾಗಿದೆ. ಸರ್ವರ್ ಸಮಸ್ಯೆ ಇದ್ದು, ಅದನ್ನು ಶೀಘ್ರವೇ ಬಗೆಹರಿಸಲಾಗುವುದು. ಜನರಿಗೆ ಅನುಕೂಲವಾಗುವಂತೆ ಸರ್ಕಾರ ಎಲ್ಲ ಕ್ರಮಕೈಗೊಳ್ಳಲಿದೆ.
ಮೋಹನ್‌ಕುಮಾರ್ ಪಂಡಿತ್, ಜಿಲ್ಲಾ ನೋಂದಣಾಧಿಕಾರಿ, ಮೈಸೂರು