ಸಕಲೇಶಪುರ: ಪಶ್ಚಿಮಘಟ್ಟದಲ್ಲಿ ಹಬ್ಬುತ್ತಿದ್ದ ಕಾಳ್ಗಿಚ್ಚು ನಂದಿಸಲು ತೆರಳಿ ಗಾಯಗೊಂಡಿದ್ದ ಸಕಲೇಶಪುರ ವಲಯದ ಅರಣ್ಯ ರಕ್ಷಕ ಸುಂದರೇಶ್ (11) ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಗುರುವಾರ ಮುಂಜಾನೆ ತನ್ನೊಂದಿಗೆ ಮಾರನಹಳ್ಳಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಹಾಗೂ ಅರಣ್ಯ ವೀಕ್ಷಕರಾದ ತುಂಗೇಶ್ ಹಾಗೂ ಮಹೇಶ್ ಎಂಬುವವರೊಂದಿಗೆ ಪಶ್ಚಿಮಘಟ್ಟದ ಇಟ್ಟಿಗೆಗೂಡು ವಲಯದಲ್ಲಿ ಹಬ್ಬುತ್ತಿದ್ದ ಕಾಡಿಚ್ಚನ್ನು ನಂದಿಸಲು ತೆರಳಿದ್ದ ವೇಳೆ ಆಳೆತ್ತರದ ಆನೆಹುಲ್ಲಿನ ಬೆಂಕಿ ಅರಣ್ಯ ಸಿಬ್ಬಂದಿಗಳನ್ನು ಅವರಿಸಿದ್ದರಿಂದ ಮಂಜುನಾಥ್ ಹಾಗೂ ಸುಂದರೇಶ್ ಮರಣಾಂತಿಕವಾಗಿ ಗಾಯಗೊಂಡರೆ,ಮತ್ತಿಬ್ಬರು ಸಿಬ್ಬಂದಿ ಬಾಗಶಃ ಗಾಯಗೊಂಡಿದ್ದರು. ಹೆಚ್ಚು ಗಾಯಗೊಂಡ ಸಿಬ್ಬಂದಿಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದರಾದರು.
ಚಿಕಿತ್ಸೆ ಫಲಕಾರಿಯಾಗದೆ ಸುಂದರೇಶ್ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಬೆಂಗಳೂರಿನಿಂದ ಸಕಲೇಶಪುರಕ್ಕೆ ತಂದು ಪಟ್ಟಣದ ಅರಣ್ಯ ಇಲಾಖೆ ಅವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹೂಗುಚ್ಚ ಈಡುವ ಮೂಲಕ ಗೌರವ ಸಲ್ಲಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾವಿರಾರು ಸಾರ್ವಜನಿಕರು ಕಣ್ಣೀರಿನ ನಡುವೆ ಅಂತಿಮ ದರ್ಶನ ಪಡೆದರು. ನಂತರ ಇಲ್ಲಿಂದ ಹುಟ್ಟೂರಾದ ತಿರ್ಥಹಳ್ಳಿ ತಾಲೂಕಿನ ಸಂಪಿಗೆಹಾರ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಬಾನುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಪತ್ನಿ, ನಾಲ್ಕು ವರ್ಷದ ಪುತ್ರಿಯನ್ನು ಅಗಲಿದ್ದಾರೆ.