ಮೈಸೂರು: ಬಂಗಾರಪ್ಪ ವಿಚಾರ ವೇದಿಕೆ ಮತ್ತು ಬಂಗಾರಪ್ಪ ಪ್ರತಿಷ್ಠಾನದ ವತಿಯಿಂದ ಕೊಡ ಮಾಡುವ ಬಂಗಾರ ಸಾಹಿತ್ಯ ಪ್ರಶಸ್ತಿಗೆ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಅವರು ಸೇರಿದಂತೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ.
ಬೆಳಗಾವಿಯ ರಾಧಾಬಾಯಿ ಮಾದರ ಅವರಿಗೆ ಜನಪದ ಬಂಗಾರ, ಕಲಬುರಗಿಯ ಜೇವರ್ಗಿ ರಾಜಣ್ಣ ಅವರಿಗೆ ರಂಗ ಬಂಗಾರ ಪ್ರಶಸ್ತಿ ಹಾಗೂ ಧರ್ಮ ಪ್ರವರ್ತಕ ಶ್ರೀ ತೋಟದಪ್ಪ ಧರ್ಮಸಂಸ್ಥೆ (ಅಧ್ಯಕ್ಷರು ಎಲ್.ರೇವಣ್ಣ ಸಿದ್ದಯ್ಯ ನಿವೃತ್ತ ಐಪಿಎಸ್ ಅಧಿಕಾರಿ)ಗೆ ಸೇವಾ ಬಂಗಾರ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಅ. 26ರಂದು ಸೊರಬದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಬಂಗಾರಪ್ಪ ವಿಚಾರ ವೇದಿಕೆ ಪ್ರಧಾನ ಸಂಚಾಲಕ ಕೆ.ವಿ.ನಾಗರಾಜಮೂರ್ತಿ ತಿಳಿಸಿದ್ದಾರೆ.
ಪ್ರತಿವರ್ಷ ಬಂಗಾರಪ್ಪ ಅವರ ಜನ್ಮದಿನಾಚರಣೆ ಪ್ರಯುಕ್ತ ವಿಚಾರ ಸಂಕಿರಣದ ಜತೆಗೆ ಈ ನಾಡಿನ ಅನನ್ಯ ಚೇತನಗಳಿಗೆ ಬಂಗಾರಪ್ಪ ಅವರ ಹೆಸರಿನಲ್ಲಿ ಬಂಗಾರ ಪ್ರಶಸ್ತಿ ನೀಡುತ್ತಿದೆ. ಒಂದು ಲಕ್ಷ ರೂ. ನಗದು ಮತ್ತು ತಾಮ್ರ ಫಲಕದೊಂದಿಗೆ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕನ್ನಡದ ಪ್ರಗತಿಪರ ಚಳವಳಿಗಳೊಂದಿಗೆ ಬೆಳೆದು ಬಂದ ಪ್ರೊ.ಕಾಳೇಗೌಡ ನಾಗವಾರ ಅವರು ಕಥೆಗಾರ, ಕವಿ, ವಿಚಾರವಾದಿ ಹಾಗೂ ಜಾನಪದ ತಜ್ಞರು. ಕನ್ನಡದ ಸಾಂಸ್ಕೃತಿಕ ಇತಿಹಾಸದ ಪ್ರಮುಖ ಘಟ್ಟವಾದ ಬಂಡಾಯ ಸಾಹಿತ್ಯ ಚಳವಳಿಯ ಸ್ಥಾಪಕ ಸಂಚಾಲಕರಲ್ಲೊಬ್ಬರು.
ಗ್ರಾಮ ಸೊಗಡಿನಿಂದ ಎದ್ದು ಬಂದ ಕಾಳೇಗೌಡರು ಕಲೆ ಹಾಗೂ ಕಲಾವಿದರ ನೋವು ನಲಿವುಗಳ ಅಂತರಂಗ ಬಲ್ಲವರು. ಕರ್ನಾಟಕದ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಅವರು ರಾಮ ಮನೋಹರ ಲೋಹಿಯಾ ಅವರ ಸಮಾಜವಾದಿ ವಿಚಾರಗಳನ್ನು ಸಮಗ್ರವಾಗಿ ಕನ್ನಡಕ್ಕೆ ತರಲು ಶ್ರಮಿಸಿದ್ದಾರೆ.
ಕಥಾಸಂಕಲನ, ಕಾವ್ಯ, ವಿಚಾರ-ವಿಮರ್ಶೆ, ಜಾನಪದ ಗಿರಿಜನ ಕಾವ್ಯ ಹಾಗೂ ಸಂಸ್ಕೃತಿ ಹೀಗೆ ಹಲವಾರು ಕ್ಷೇತ್ರಗಳಿಗೆ ವಿಸ್ತರಿಸಿಕೊಂಡ ಕಾಳೇಗೌಡ ನಾಗವಾರ ಅವರು ಜನಪರ ಆಲೋಚನೆಯುಳ್ಳ ಬರಹಗಾರರು.