ಸೋಮವಾರಪೇಟೆ: ಕೊಡಗು ಜಿಲ್ಲಾ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆಯಿಂದ ಕೂತಿ ಗ್ರಾಮದ ಒಕ್ಕಲಿಗರ ಸಮುದಾಯ ಭವನದಲ್ಲಿ ಗುರುವಾರ ಕಾಳುಮೆಣಸು ಬೇಸಾಯದ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.
ವಿಷಯ ತಜ್ಞ ಪ್ರವೀಣ್ ಮಾತನಾಡಿ, ಕಾಳುಮೆಣಸು ಬೇಸಾಯ ಹಾಗೂ ರೋಗ ಹತೋಟಿಯ ಬಗ್ಗೆ ಮಾಹಿತಿ ನೀಡಿದರು. ರೈತರು ಸ್ಥಳೀಯ ವಾತಾವರಣಕ್ಕೆ ಮತ್ತು ಮಣ್ಣಿಗೆ ಹೊಂದಿಕೊಳ್ಳುವ ತಳಿಯನ್ನು ಬೆಳೆಯಬೇಕು. ವೈಜ್ಞಾನಿಕ ಮಾದರಿಯಲ್ಲಿ ಕೃಷಿ ಮಾಡಬೇಕು. ರೋಗಪೀಡಿತ ಬಳ್ಳಿಯನ್ನು ನೆಡಬಾರದು. ಬಳ್ಳಿಗಳಿಗೆ ರೋಗಬಂದರೆ ಕೂಡಲೇ ಇಲಾಖೆಯನ್ನು ಸಂಪರ್ಕಿಸಿ ಸೂಕ್ತ ಮಾಹಿತಿ ತೆಗೆದುಕೊಂಡು ಔಷಧೋಪಚಾರ ಮಾಡಬೇಕು ಎಂದರು.
ಕೂತಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಡಿ.ಮೋಹನ್, ಕಾರ್ಯದರ್ಶಿ ಬಿ.ಆರ್.ವಿನೋದ್ ಕುಮಾರ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ(ಪ್ರಭಾರ)ರಾದ ಕಾವ್ಯ, ಸಹಾಯಕ ಅಧಿಕಾರಿ ಹೇಮರಾಜ್, ತೋಳೂರು ಶೆಟ್ಟಳ್ಳಿ ಗ್ರಾ ಪಂ ಸದಸ್ಯೆ ದಿವ್ಯ ಇದ್ದರು.