ಚಿತ್ರದುರ್ಗ: ನವರಾತ್ರಿ ಮಹೋತ್ಸವದ ನಾಲ್ಕನೇ ದಿನ ಬುಧವಾರ ಕೂಷ್ಮಾಂಡಾ ದೇವಿ ಆರಾಧನೆಯೊಂದಿಗೆ ಜಿಲ್ಲೆಯ ಹಲವು ಶಕ್ತಿದೇವತೆಗಳ ದೇಗುಲಗಳಲ್ಲಿ ವಿಶೇಷ ಪೂಜೆ, ಅಲಂಕಾರ ಸೇವೆ, ಪ್ರಾರ್ಥನೆ ನೆರವೇರಿತು.
ಕಾಳಿ ರೂಪದಲ್ಲಿ ಉಚ್ಚಂಗೆಮ್ಮ: ಪಾಳೆಗಾರರ ಕುಲದೇವತೆ ಕೋಟೆ ರಸ್ತೆಯ ಉಚ್ಚಂಗಿಯಲ್ಲಮ್ಮ ದೇಗುಲದಲ್ಲಿ ಕಾಳಿ ರೂಪದಲ್ಲಿ ದೇವಿ ಮೂರ್ತಿ ಕಂಗೊಳಿಸಿತು. ಇದೇ ಮೊದಲ ಬಾರಿ ಕಾಡಿನ ಮಧ್ಯೆ ಪಾಳು ಬಿದ್ದ ಗುಹೆಯೊಳಗೆ ದುರ್ಗಾ ಮಾತೆ ಪ್ರತಿಷ್ಠಾಪನೆಗೊಂಡ ಮಾದರಿಯಲ್ಲಿ ವಿಶೇಷವಾಗಿ ಅಲಂಕರಿಸಲಾಗಿತ್ತು.
ಮುಂಭಾಗ ಸಿಂಹಗಳ ಮಾದರಿ, ಪಕ್ಷಿ, ಮೊಲಗಳು ಸಂಚರಿಸುವಂತೆ ನೈಜತೆ ಸೃಷ್ಟಿಸಲಾಗಿತ್ತು. ಇದು ಅನೇಕ ಭಕ್ತರ ಗಮನ ಸೆಳೆಯಿತು.
ನವದುರ್ಗೆಯರಾದ ಬರಗೇರಮ್ಮ ದೇವಿಗೆ ನೂರಾರು ಎಲೆ, ಸಾವಿರಾರು ಅಡಿಕೆಗಳಿಂದ ಅಲಂಕಾರ ಸೇವೆ ಜರುಗಿತು. ಅಧಿದೇವತೆ ಏಕನಾಥೇಶ್ವರಿ, ಕಣಿವೆಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಚೌಡೇಶ್ವರಿ, ಬನ್ನಿ ಮಹಾಕಾಳಿ, ಕುಕ್ಕವಾಡೇಶ್ವರಿ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಕಾಳಿಕಾದೇವಿ, ಲಕ್ಷ್ಮೀಸಾಗರ ಗೇಟ್ ಬಳಿಯ ತುಳಜಾ ಭವಾನಿ ಸೇರಿ ಹಲವು ದೇಗುಲಗಳಲ್ಲಿ ದೇವಿ ಮೂರ್ತಿಯನ್ನು ಪುಷ್ಪ, ತರಕಾರಿ, ಇತರ ವಸ್ತುಗಳಿಂದ ಸಿಂಗರಿಸಲಾಗಿತ್ತು.
ಕೆಲವೆಡೆ ಚಾಮುಂಡೇಶ್ವರಿ ದೇವಿ ಅಷ್ಟೋತ್ತರ ಶತನಾಮಾವಳಿ, ದುರ್ಗಾ ಸಹಸ್ರನಾಮ, ಪಾರಾಯಣ ನಡೆಯಿತು. ಮುಂಜಾನೆ ಮಹಾಮಂಗಳಾರತಿ ನಂತರ ರಾತ್ರಿವರೆಗೂ ಸಾವಿರಾರು ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಿಕೊಂಡರು.