ಗುಬ್ಬಿ: ತಾಲೂಕಿನ ಚೇಳೂರು ಹೋಬಳಿ ಸಾತೇನಹಳ್ಳಿ ಗೇಟ್ ಬಳಿಯ ನರ್ಸರಿಯಲ್ಲಿ ಜಿಪಂ ಜಲಾನಯನ ಯೋಜನೆ ಹಾಗೂ ಕೃಷಿ ಇಲಾಖೆ ಆಯೋಜಿಸಿದ್ದ "ಕೋಟಿ ವೃಾರೋಪಣ' ಕಾರ್ಯಕ್ರಮಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಭಾನುವಾರ ಚಾಲನೆ ನೀಡಿದರು.
ರಾಜ್ಯದಲ್ಲಿ 80 ಲಕ್ಷ ಸಸಿ ಬೆಳೆಸಲಾಗಿದೆ. ಸಾತೇನಹಳ್ಳಿಯಲ್ಲಿ 2.5 ಲಕ್ಷ ಸಸಿ ವಿತರಣೆಗೆ ಸಿದ್ಧವಿದೆ. ಚೆಕ್ ಡ್ಯಾಂ ನಿರ್ಮಾಣಕ್ಕೆ ಒತ್ತು ನೀಡಿ ಈಗಾಗಲೇ ಭೂಮಿಗೆ ನೀರು ಇಂಗಿಸುವ ಕೆಲಸಕ್ಕೆ ಸರ್ಕಾರ 640 ಕೋಟಿ ರೂಪಾಯಿ ನೀಡಿದೆ. ಶೇ.50 ರೈತ ಮಕ್ಕಳ ಉನ್ನತ ವ್ಯಾಸಂಗಕ್ಕೆ 11 ಸಾವಿರ ಪ್ರೋತ್ಸಾಹಧನ ನೀಡಲಾಗಿದೆ. ರೈತ ಕುಟುಂಬದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ 2 ಸಾವಿರ ರೂ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು.
ಜಲಾನಯನ ಇಲಾಖೆಯ ಆಯುಕ್ತ ವೆಂಕಟೇಶ್ ಮಾತನಾಡಿ, ಒಂದು ಕೋಟಿ ವೃಕ್ಷ ಕಾರ್ಯಕ್ರಮ ನಡೆಸಿ ಬಹುಕಾಲ ಬಾಳಿಕೆ ಜಾತಿಯ ಸಸಿಗಳನ್ನು ವಿತರಿಸಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಬಳಸಿ ಸಸಿ ಪೋಷಿಸಿ ಜತೆಗೆ ಸುಸ್ಥಿರ ಕೃಷಿ ಲಾಭದಾಯಕ ಕೃಷಿಯಾಗಿಸಲು ರೈತರು ಬದ್ಧರಾಗಿ ಎಂದರು. ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಸಿ ಹಾಗೂ ಬಿತ್ತನೆ ಬೀಜ ವಿತರಿಸಲಾಯಿತು.
700 ಕೇಸು ದಾಖಲು: ಬೆಲೆ ಹೆಚ್ಚಿಸುವ ಹುನ್ನಾರ ಮಾಡಿರುವವರು ಹಾಗೂ ಕಳಪೆ ಬೀಜ ಮಾರಾಟ ಮಾಡುವವರ ವಿರುದ್ಧ ಕ್ರಮಕ್ಕೆ ಜಾಗೃತಿದಳ ಮೂಲಕ ದೂರು ಬಂದಲ್ಲಿ ಕ್ರಮ ವಹಿಸಿ ಲೈಸನ್ಸ್ ರದ್ದು ಮಾಡಲಾಗುತ್ತದೆ. ಈವರೆಗೂ 700 ಕೇಸು ದಾಖಲಿಸಿದ್ದು, 248 ಪರವಾನಗಿ ರದ್ದು ಮಾಡಲಾಗಿದೆ. ಪ್ರತಿ ಅಂಗಡಿಯಲ್ಲಿ ದರಪಟ್ಟಿ ಹಾಕಲು ಸೂಚಿಸಲಾಗಿದೆ. ಸಿಬ್ಬಂದಿ ಕೊರತೆ ನೀಗಿಸಲು 300 ಹುದ್ದೆ ನೇಮಕಕ್ಕೆ ಕ್ರಮ ವಹಿಸಲಾಗಿದೆ. ಈ ಜತೆಗೆ ಸ್ಥಳಿಯ ರೈತರ ಮಾವಿನಹಣ್ಣು ಮಾರಾಟಕ್ಕೆ ಇಲ್ಲಿಯೇ ಜ್ಯೂಸ್ ಕಾರ್ಖಾನೆಗೆ ತೋಟಗಾರಿಕೆ ಸಚಿವರೊಟ್ಟಿಗೆ ಚರ್ಚಿಸಲಾಗುವುದು ಎಂದ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದರು.
ಇದುವರೆಗೂ ನೆಟ್ಟ ಸಸಿಗಳ ಪೈಕಿ ಕೇವಲ ಶೇ.10 ಮಾತ್ರ ಉಳಿದಿವೆ. ಪರಿಸರ ರಕ್ಷಣೆಗೆ ಅರಣ್ಯ ಇಲಾಖೆ ಚುರುಕಿನ ಕೆಲಸ ಮಾಡಬೇಕಿದೆ. ಪ್ರತಿ ಮಹಿಳಾ ಸ್ವ&ಸಹಾಯ ಸಂದ ಸದಸ್ಯರಿಗೆ ತಲಾ ಎರಡು ಸಸಿ ಬೆಳೆಸಿ ಪೋಷಿಸಲು ಸಹಾಯ ನೀಡಿದಲ್ಲಿ ಹಸಿರು ಕ್ರಾಂತಿಗೆ ಮುನ್ನುಡಿ ಆಗುತ್ತದೆ. > ಜಿ.ಎಸ್.ಬಸವರಾಜು, ಸಂಸದ