ಕಾಳಗಿ: ಸುಂಠಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 16 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ, ವರ್ಗಾವಣೆಗೊಂಡ ಶಿಕ್ಷಕರಾದ ರಾಜು ನಾವಿ, ಯಶವಂತರಾವ ಪವಾರ್, ಸಂಧ್ಯಾ ಪೂಜಾರ್ ಅವರನ್ನು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮಂಗಳವಾರ ಆತ್ಮೀಯವಾಗಿ ಬೀಳ್ಕೊಟ್ಟರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಗೋಪಾಲ ರಾಠೋಡ್ ಮಾತನಾಡಿ, ಈ ಮೂವರು ಶಿಕ್ಷಕರು ಪಾಠ ಮಾಡುವುದರ ಜತೆಗೆ, ಪ್ರತಿಯೊಬ್ಬರ ಸಹಕಾರ ಪಡೆದು ಮಾದರಿ ಶಾಲೆಯನ್ನಾಗಿ ಪರಿವರ್ತಿಸಲು ಶ್ರಮಿಸಿದ್ದಾರೆ. ಇವರಿಂದ ಕಲಿತ ನಮ್ಮ ಮಕ್ಕಳು ಉತ್ತಮ ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲ ಮಕ್ಕಳಲ್ಲಿ ಶಿಸ್ತು ರೂಢಿಸಿ, ಸುಂಠಾಣ ಶಾಲೆಗೆ ಕೀರ್ತಿ ತಂದ ಶಿಕ್ಷಕರನ್ನು ಬೇರೆಡೆ ಕಳುಹಿಸಲು ನೋವಾಗುತ್ತಿದೆ. ಆದರೆ ಸರ್ಕಾರದ ನಿಯಮದಂತೆ ವರ್ಗಾವಣೆ ಅನಿವಾರ್ಯವಾಗಿದ್ದು, ಕೂಡಲೇ ಸರ್ಕಾರ ಅಗತ್ಯ ಶಿಕ್ಷಕರನ್ನು ನಿಯೋಜನೆ ಮಾಡಬೆಕು ಎಂದು ಒತ್ತಾಯಿಸಿದರು.
ಗ್ರಾಪಂ ಸದಸ್ಯ ಚಂದ್ರಕಾಂತ ಪೂಜಾರಿ ಮಾತನಾಡಿದರು. ವರ್ಗಾವಣೆಗೊಂಡ ಶಿಕ್ಷಕರಾದ ರಾಜು ನಾವಿ, ಯಶವಂತರಾವ ಪವಾರ್, ಸಂಧ್ಯಾ ಪೂಜಾರ್ ಅವರನ್ನು ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಗೀತಾ ಪ್ರೇಮಕುಮಾರ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷ ರವಿಕುಮಾರ್ ಬಶೆಟ್ಟಿ, ಗ್ರಾಪಂ ಸದಸ್ಯರಾದ ಮಲ್ಲಪ್ಪ ಚಿಂತಕೊಟಿ, ಲಕ್ಷ್ಮೀ ಸಂತೋಷ, ಚಿಂಚೋಳಿ ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ, ಶಿಕ್ಷಕರಾದ ವೀರೇಶ ಕಲ್ಮಡಿ, ಗಂಗಾಧರ ಯೋಗಿ ಇತರಿದ್ದರು.
ಮುಖ್ಯಗುರು ಹಣಮಂತ ಮತ್ತೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ಮಡಿವಾಳ ನಿರೂಪಿಸಿ ವಂದಿಸಿದರು.
ಇದಕ್ಕೂ ಮೊದಲು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವರ್ಗಾವಣೆಗೊಂಡ ಶಿಕ್ಷಕರನ್ನು ಮೆರವಣಿಗೆ ಮಾಡಲಾಯಿತು. ಪಾಲಕರು, ಗ್ರಾಮಸ್ಥರು ಹೂ ಮಳೆ ಸುರಿಸಿದರು.