ಜಿಲ್ಲೆ

ಕಾಲ್ಪನಿಕ ವೇತನ ಬಡ್ತಿ ಜಾರಿಗೊಳಿಸಿ

ರಾಣೆಬೆನ್ನೂರ: ಕಾಲ್ಪನಿಕ ವೇತನ ಬಡ್ತಿ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ನೌಕರರ ಸಮನ್ವಯ ಸಮಿತಿ ತಾಲೂಕು ಘಟಕದ ವತಿಯಿಂದ ಶುಕ್ರವಾರ ಶಾಸಕ ಅರುಣಕುಮಾರ ಪೂಜಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಹಾಗೂ ನೌಕರರು ಕಳೆದ ಹಲವು ವರ್ಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರ ನೌಕರರ ಯಾವುದೇ ಬೇಡಿಕೆ ಈಡೇರಿಸುತ್ತಿಲ್ಲ.

ಮಠ ಮಾನ್ಯಗಳಿಂದ ಹಾಗೂ ಶಿಕ್ಷಣ ಪ್ರೇಮಿಗಳಿಂದ ಉಳಿದುಕೊಂಡಿದ್ದ ಶಾಲೆಗಳು ಇದೀಗ ಸರ್ಕಾರದ ಮಾರಕ ಆದೇಶಗಳಿಂದ ಮುಚ್ಚುವ ಹಂತಕ್ಕೆ ತಲುಪಿವೆ. ಆದ್ದರಿಂದ ರಾಜ್ಯ ಸರ್ಕಾರ 1995ರಿಂದ ಆರಂಭವಾಗಿರುವ ಶಾಲೆಗಳಿಗೆ ಅನುದಾನ ನೀಡಬೇಕು. ಕೋವಿಡ್-19ರ ಸಂಕಷ್ಟದ ಹಿನ್ನೆಲೆಯಲ್ಲಿ ಅನುದಾನ ರಹಿತ ಶಿಕ್ಷಕರಿಗೆ ಸರ್ಕಾರ ವೇತನ ಭರಿಸಬೇಕು.

ಅನುದಾನಿತ ಪ್ರೌಢಶಾಲೆಗಳಲ್ಲಿ 2015ರ ವರೆಗೆ ಹುದ್ದೆ ತುಂಬಲು ಅವಕಾಶ ನೀಡಿ ಪುನಃ ಆರ್ಥಿಕ ಮಿತವ್ಯಯ ಹೇರಿದ್ದು, ಅದನ್ನು ವಾಪಸ್ ಪಡೆಯಬೇಕು. ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಪಿ. ಬಣಕಾರ, ತಾಲೂಕು ಅಧ್ಯಕ್ಷ ಡಾ. ಮಾಲತೇಶ, ಕಾರ್ಯದರ್ಶಿ ಸಿ.ಎಸ್. ಗ್ಯಾನಗೌಡ್ರ, ಜಿ.ಬಿ. ಮಾಸಣಗಿ, ಸಿ.ಎಲ್. ಶಿಡಗನಾಳ, ಶಾಂತರಾಜ ಬಿಷ್ಟನಗೌಡ್ರ, ಗಂಗಾಧರ ಪಾರ್ವತೇರ ಮತ್ತಿತರರು ಉಪಸ್ಥಿತರಿದ್ದರು.