ವಿಜಯಪುರ: ಮಹಾಮಾರಿ ಕರೊನಾ ಹಿನ್ನೆಲೆ ಕಳೆದ ಎಂಟು ತಿಂಗಳಿಂದ ಸ್ಥಗಿತಗೊಂಡಿದ್ದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕಾಲೇಜ್‌ಗಳಿಗೆ ಮಂಗಳವಾರ ಚಾಲನೆ ಸಿಕ್ಕಿತಾದರೂ ಬಹುತೇಕ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ನಿರಾಸಕ್ತಿ ತೋರಿದರು.
ಆರೋಗ್ಯ ತಪಾಸಣೆ ಪತ್ರ, ಪಾಲಕರಿಂದ ಒಪ್ಪಿಗೆ ಪತ್ರ ತರುವುದು ಕಡ್ಡಾಯವಾದ್ದರಿಂದ ಬಹುತೇಕ ವಿದ್ಯಾರ್ಥಿಗಳು ಕಾಲೇಜ್‌ನತ್ತ ಸುಳಿಯಲಿಲ್ಲ. ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಹಿಂಜರಿಯುತ್ತಿದ್ದು ಆಸ್ಪತ್ರೆಯತ್ತ ತೆರಳಲು ಆತಂಕ ಪಡುತ್ತಿರುವುದೇ ಕಾಲೇಜ್‌ನಿಂದ ಮೊದಲ ದಿನ ದೂರ ಉಳಿಯಲು ಕಾರಣ ಎಂಬುದು ತಿಳಿದು ಬಂತು.
ಕೆಲ ಖಾಸಗಿ ಕಾಲೇಜ್‌ಗಳು ಎಂದಿನಂತ ತರಗತಿ ಆರಂಭಿಸಿದ್ದವಾದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು. ಮುಂಜಾಗೃತ ಕ್ರಮವಾಗಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಲಾಗಿತ್ತು. ಕೆಲವು ವಿದ್ಯಾರ್ಥಿಗಳು ಪ್ರಮಾಣ ಪತ್ರದೊಂದಿಗೆ ಕಾಲೇಜ್‌ಗೆ ಆಗಮಿಸಿದ್ದು ಕಂಡು ಬಂತು. ಇನ್ನು ಸರ್ಕಾರಿ ಕಾಲೇಜ್‌ಗಳತ್ತ ವಿದ್ಯಾರ್ಥಿಗಳು ಹಾಗೂ ಪ್ರಾಚಾರ್ಯರು ಸುಳಿಯದಿರುವುದು ಕಂಡು ಬಂತು. ನಗರದ ನವಬಾಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ಮಹಾತ್ಮ ಗಾಂಧಿ ವೃತ್ತದ ಬಳಿಯಿರುವ ಬಾಲಕಿಯರ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳು ಕಂಡು ಬರಲಿಲ್ಲ. ಈವರೆಗೂ ಯಾರೂ ಪ್ರಮಾಣ ಪತ್ರ ತಂದಿಲ್ಲದ ಕಾರಣ ತರಗತಿ ನಡೆಸಲಾಗುತ್ತಿಲ್ಲವೆಂದು ಅಲ್ಲಿನ ಪ್ರಾಚಾರ್ಯರು ತಿಳಿಸಿದರು.
ಒಟ್ಟಿನಲ್ಲಿ ಕಾಲೇಜ್ ಆರಂಭದ ಮೊದಲ ದಿನ ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ ಕಂಡು ಬಂದಿದ್ದು ಇನ್ನೂ ಆತಂಕ ಕಾಡುತ್ತಿರುವುದು ಸಾಬೀತಾಗಿದೆ.