ಹಾಸನ: ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಗಿದ್ದು, ಯುವತಿಯರು ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮಾಹಾವೀರ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಎಂ. ಧನ್‌ಪಾಲ್ ಹೇಳಿದರು.
ನಗರದ ಆರ್.ಸಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ (ಗಂಧದಕೋಠಿ) ಕಾಲೇಜಿನಲ್ಲಿ ಸೋಮವಾರ ಕಾಲೇಜಿನ ಐ.ಕ್ಯೂಎ.ಸಿ. ಘಟಕ, ರೋಟರಿ ಕ್ಲಬ್ ಆಫ್ ಹಾಸನ ಮಿಡ್ ಟೌನ್ ಹಾಸನ, ಮಾಹಾವೀರ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೋಟರಿ ಹಾಗೂ ನಮ್ಮ ಸಂಸ್ಥೆಯ ಮೂಲಕ ಜಿಲ್ಲೆಯ ಹಲವು ಭಾಗಗಳಲ್ಲಿ ಸಾಮಾಜಿಕ ಕಾರ್ಯಗಳನ್ನು ನಡೆಸಲಾಗುತ್ತಿದ್ದು, ಮಹಿಳಾ ಕಾಲೇಜಿನ ಆಡಳಿತ ಮಂಡಳಿ ಮನವಿಯ ಮೇರೆಗೆ ಕುಡಿಯುವ ನೀರಿನ ಫೀಲ್ಟರ್ ನೀಡಲಾಗಿದೆ ಎಂದರು.
ರೋಟರಿ ಕ್ಲಬ್ ಆಫ್ ಹಾಸನ ಮಿಡ್ ಟೌನ್‌ನ ಅಧ್ಯಕ್ಷೆ ಮಮತಾ ಪಾಟೀಲ್ ಮಾತನಾಡಿ, ರೋಟರಿ ಸಂಸ್ಥೆಯು ಪರಿಸರ, ಶಿಕ್ಷಣ ಹಾಗೂ ವೈದ್ಯಕೀಯ ಕ್ಷ್ರೇತ್ರಗಳಲ್ಲಿ ತನ್ನ ಸೇವೆಯನ್ನ ನಿರ್ವಹಿಸಿದ್ದು, ಶುದ್ಧನೀರು ಉತ್ತಮ ಆರೋಗ್ಯ ಅವಶ್ಯಕ ಎಂದರು.
ರೋಟರಿ ಸಹಾಯಕ ಗೌವರ್ನರ್ ಡಾ.ಬಿ.ಕೆ. ಸೌಮ್ಯಮಣಿ ಮಾತನಾಡಿ, ದೇಶದಲ್ಲಿ ಆರೋಗ್ಯ, ಶಿಕ್ಷಣ ಮುಂತಾದವುಗಳನ್ನು ಮಹಿಳೆಯ ಮೇಲೆ ಹೂಡಿಕೆ ಮಾಡಿದರೆ ದೇಶ ಮುನ್ನಡೆಯುತ್ತದೆ. ಶುದ್ಧನೀರಿನಿಂದ ಆರೋಗ್ಯ ಸುಧಾರಿಸುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಗ್ರಾಮೀಣ ವಿಭಾಗದ ವಿಧ್ಯಾರ್ಥಿಗಳೇ ಹೆಚ್ಚಿರುವುದರಿಂದ ವಾಟರ್ ಫಿಲ್ಟರ್ ಅವಶ್ಯಕತೆ ಇತ್ತು. ಸರ್ಕಾರಿ ಕಾಲೇಜಿಗೆ ರೋಟರಿ ಎಂತಹ ಸಂಸ್ಥೆಗಳು ಸಹಾಯ ಮಾಡುವುದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ರೋಟರಿ ಕ್ಲಬ್ ಆಫ್ ಹಾಸನ್ ಸದಸ್ಯರಾದ ಡಾ. ವಿಕ್ರಂ, ಕೆ.ಸಿ. ನವೀನ್, ವಲಯ ಸೇನಾನಿ ಶಿವಕುಮಾರ್, ಉಪನ್ಯಾಸಕರಾದ ಡಾ. ದಯಾನಂದ, ಬಿಂದು, ಮಾಹಾವೀರ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಇತರರು ಇದ್ದರು.