ಜಿಲ್ಲೆ

ಕಾಲುವೆಗೆ ಬೈಕ್ ಬಿದ್ದು ಸವಾರ ಸಾವು

ಚಾಮರಾಜನಗರ: ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಸಮೀಪದ ಕಾಲುವೆಗೆ ಬೈಕ್ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಮಂಜುನಾಥ್ (25) ಮೃತ. ಈತ ಕಾವೇರಿ ವನ್ಯಧಾಮ ಕೌದಳ್ಳಿ ಫಾರೆಸ್ಟ್ ರೇಂಜ್‌ನಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ. ಬುಧವಾರ ಮುಂಜಾನೆ ಸಿದ್ದಯ್ಯನಪುರ ಮಾರ್ಗವಾಗಿ ಬರುವಾಗ ಗುರುಲಿಂಗಯ್ಯ ಅವರ ಜಮೀನಿನ ತಿರುವಿನಲ್ಲಿ ಕಾಲುವೆಗೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೂರ್ವ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನವೀನ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಿಮ್ಸ್ ಆಸ್ಪತ್ರೆಗೆ ರವಾನಿಸಿದರು. ಬಳಿಕ ವಾರಸುದಾರರಿಗೆ ಒಪ್ಪಿಸಿದರು.